ಭಟ್ಕಳ: ಶಿಲ್ಪಿಯ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ನಿನ್ನೆ ಪಾರ್ಟಿ ಎಂದು ಮನೆಯಿಂದ ಹೊರಟವನು ಇಂದು ಶವವಾಗಿ ಪತ್ತೆಯಾಗಿದ್ದಾನೆ.
ಮುರ್ಡೇಶ್ವರ ಕೊಪ್ಪ ಪಂಚಾಯತ ವ್ಯಾಪ್ತಿಯ ಹಂದಕಣಿಯಲ್ಲಿ ರವಿ ಎಂಬಾತನ ದೇಹವು ನೇಣು ಬಿಗಿದ ಸ್ಥಿತಿಯಲ್ಲಿ ಆತನ ಮನೆಯ ಹಿಂಭಾಗದಲ್ಲಿ ದೊರೆತಿರುವುದು ಇದೀಗ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಈತ ಶಿಲ್ಪಿ ಕೆಲಸ ಮಾಡುತ್ತಿದ್ದು ಸದ್ಯ ಹೊನ್ನಾವರ ತಾಲೂಕಿನ ಮಂಕಿಯ ಕುಂಬಾರ ಕೇರಿಯ ಶಂಭುಲಿಂಗೇಶ್ವರ ದೇವಸ್ಥಾನದ ಕೆಲಸ ಮಾಡುತಿದ್ದ ಎನ್ನಲಾಗಿದೆ.
ನಿನ್ನೆ ರಾತ್ರೆ ಯಾವುದೋ ಪಾರ್ಟಿ ಇದೆ ಎಂದು ಹೋದವನು ಮನೆಗೆ ವಾಪಾಸ್ ಬಂದಿರಲಿಲ್ಲ ಎನ್ನಲಾಗಿದೆ. ಆದರೆ ಇಂದು ಈತನ ದೇಹವು ಆತನ ಮನೆಯ ತೋಟದಲ್ಲಿ ಸಿಕ್ಕಿದ್ದರಿಂದ ಆತನ ಸಂಬಂಧಿಕರು ಹತ್ಯೆಯ ಸಂಶಯ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮುರುಡೇಶ್ವರ ಠಾಣೆಯಲ್ಲಿ ಸಂಶಯಾಸ್ಪದ ಸಾವು ಎಂದು ಪ್ರಕರಣ ದಾಖಲಾಗಿದೆ. ತನಿಖೆಯ ನಂತರ ಪೂರ್ಣ ಮಾಹಿತಿ ಹೊರಬರಬೇಕಿದೆ.