ದಾವಣಗೆರೆ : ಹರಪನಹಳ್ಳಿ ರಾಷ್ಟ್ರೀಯ ಮಟ್ಟದ ಕಬಡ್ಡಿ ಕ್ರೀಡಾಪಟು ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ತಾಲೂಕಿನ ತೊಗರಿಕಟ್ಟಿ ಸಮೀಪ ಬುಧವಾರ ಸಂಜೆ ಜರುಗಿದೆ.

ತಾಲೂಕಿನ ಉದ್ಗಟ್ಟಿದೊಡ್ಡತಾಂಡ (ಬಾಪೂಜಿನಗರ)ದ ನಿವಾಸಿ ಅಶೋಕ (22) ಮೃತಪಟ್ಟ ಕ್ರೀಡಾಪಟು. ಬೈಕ್ ಹಿಂಬದಿ ಸವಾರ ಶಿವನಾಯ್ಕ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ಬಿಎಸ್ಸಿ ವ್ಯಾಸಂಗ ಮಾಡುತ್ತಿದ್ದ ಅಶೋಕ, ಈಚೆಗೆ ನಡೆದ ರಾಷ್ಟ್ರಮಟ್ಟದ ಅಂತರ್ ಕಾಲೇಜು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದ. 2018ರ ಆಗಸ್ಟ್ 29, 30ರಂದು ನೇಪಾಳದ ಕಠ್ಮಂಡುನಲ್ಲಿ ನಡೆದ ಪಂದ್ಯಾವಳಿಯಲ್ಲಿ ಟೀಮ್ ಲೀಡರ್ ಆಗಿ ಪಾಲ್ಗೊಂಡು ಚಿನ್ನದ ಪದಕ ಪಡೆದಿದ್ದ.

RELATED ARTICLES  ವರದಿ ಆಧರಿಸಿ ಮಾಧ್ಯಮಗಳಿಗೆ ಉತ್ತರ ಕೊಡುವೆ :ಡಿಕೆಶಿ

ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಕಬಡ್ಡಿ ಕ್ರೀಡಾಪಟು ಆಗಿದ್ದ ಅಶೋಕ್ ಹರಪನಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿಎಸ್ಸಿ ಪದವಿ ವಿದ್ಯಾರ್ಥಿಯಾಗಿದ್ದರು. ತಮ್ಮ ಕೆಲಸ ಮುಗಿಸಿಕೊಂಡು ಸ್ನೇಹಿತನೊಂದಿಗೆ ವಾಪಸ್ ಸ್ವಗ್ರಾಮ ಉದ್ಗಟ್ಟಿ ತಾಂಡಕ್ಕೆ ಬರುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ.

RELATED ARTICLES  18ನೇ ಏಶ್ಯನ್ ಗೇಮ್ಸ್ ಟೆನ್ನಿಸ್ ನಲ್ಲಿ ಭಾರತಕ್ಕೆ ಕಂಚು.

ಸೆಮಿಸ್ಟರ್ ಪರೀಕ್ಷೆ ಆರಂಭವಾಗಿದ್ದು, ಮಂಗಳವಾರ ಕಂಪ್ಯೂಟರ್ ಸೈನ್ಸ್ ಪರೀಕ್ಷೆ ಬರೆದಿದ್ದ ಅಶೋಕ್, ಬುಧವಾರ ಇಂಗ್ಲೀಷ್ ಪರೀಕ್ಷೆಗೆ ಹಾಜರಾಗಬೇಕಿತ್ತು. ವಿದ್ಯಾರ್ಥಿ ಅಗಲಿಕೆಗೆ ಕಾಲೇಜು ಸಿಬ್ಬಂದಿ, ಸ್ನೇಹಿತರು ಹಾಗೂ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ. ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.