ಕುಮಟಾ: ಇಲ್ಲಿಯ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ, ಶಾಲೆಯ ಕಸ್ತೂರಬಾ ಇಕೋ ಕ್ಲಬ್ ಮತ್ತು ತಾಲೂಕಾ ಆರೋಗ್ಯಾಧಿಕಾರಿಗಳ ಕಛೇರಿ ಸಹಯೋಗದಲ್ಲಿ ಆರೋಗ್ಯ ಶಿಕ್ಷಣ ಕಾರ್ಯಕ್ರಮದಡಿ ಮಾನಸಿಕ ಆರೋಗ್ಯದಲ್ಲಿ ಯುವಜನತೆ ಹಾಗೂ ಚಟಗಳು ಎಂಬ ವಿಷಯದ ಮೇಲೆ ಭಾಷಣ ಸ್ಪರ್ಧೆ ಹಾಗೂ ಹದಿಹರಯದ ದೈಹಿಕ, ಮಾನಸಿಕ ಸಮಸ್ಯೆಗಳು ಮತ್ತು ಅದರ ನಿವಾರಣೋಪಾಯಗಳ ಕುರಿತು ಅರ್ಧ ದಿನದ ಅರಿವು ಕಾರ್ಯಾಗಾರ ಏರ್ಪಡಿಸಲಾಗಿತ್ತು.
ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಚೈತ್ರಪ್ರಭಾ ನಾಯಕ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಸಂವಾದಿಸುತ್ತಾ ಪರಿಹಾರ ಸೂಚಿಸಿದರು. ಬಹುತೇಕ ವಿದ್ಯಾರ್ಥಿಗಳ ಚಿತ್ತ ಚಾಂಚಲ್ಯವನ್ನು ಪ್ರಸ್ತಾಪಿಸಿ ಹರೆಯದ ಚಿತ್ತಾಕರ್ಷಣೆಗೆ ಕಡಿವಾಣ ಬೇಕೆಂದು ಅವರು ಅಭಿಪ್ರಾಯ ಪಟ್ಟರು. ಇಲಾಖೆಯ ಆಪ್ತ ಸಮಾಲೋಚಕ ಪ್ರದೀಪ ನಾಯ್ಕ ಒಂಭತ್ತರಿಂದ ಹತ್ತೊಂಬತ್ತು ವಯೋಮಾನದ ಸಹಜ ದೌರ್ಬಲ್ಯಗಳಿಂದ ದೂರವಿರಲು ಅನುಸರಿಸಬೇಕಾದ ಮನೋನಿಗ್ರಹದ ಕ್ರಮಗಳನ್ನು ಸೂಕ್ತ ಉದಾಹರಣೆಗಳೊಂದಿಗೆ ವಿವರಿಸಿದರು.
ಭಾಷಣ ಸ್ಪರ್ಧೆಯಲ್ಲಿ ಭಾಗವಹಿಸಿದ ಹತ್ತು ವಿದ್ಯಾರ್ಥಿಗಳಲ್ಲಿ ಕುಮಾರಿ ರಕ್ಷಿತಾ ಪಟಗಾರ ಪ್ರಥಮ, ಕುಮಾರಿ ಮುಕ್ತಾ ಭಟ್ಟ ದ್ವಿತೀಯ ಹಾಗೂ ಕುಮಾರ ಪ್ರಣೀತ ಕಡ್ಲೆ ತೃತೀಯ ಸ್ಥಾನ ಪಡೆದು ನಗದು ಬಹುಮಾನದಿಂದ ಪುರಸ್ಕøತರಾದರು.
ಆರೋಗ್ಯ ಶಿಕ್ಷಣಾಧಿಕಾರಿ ಆರ್.ಜಿ.ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಹಿರಿಯ ಆರೋಗ್ಯ ಸಹಾಯಕ ದಿನೇಶ ನಾಯ್ಕ ಯುವಜನತೆ ಮತ್ತು ಚಟಗಳ ಬಗ್ಗೆ ಸ್ವರಚಿತ ಕವನ ವಾಚಿಸಿ ಗಮನ ಸೆಳೆದರು. ಅಧ್ಯಕ್ಷತೆಯನ್ನು ವಹಿಸಿದ್ದ ಮುಖ್ಯಾಧ್ಯಾಪಕ ಎನ್.ಆರ್.ಗಜು ಹರಯದ ಸಮಸ್ಯೆಗಳನ್ನು ಮುಕ್ತವಾಗಿ ವೈದ್ಯರೊಡನೆ ಸಮಾಲೋಚಿಸಲು ಸಿಕ್ಕ ಅವಕಾಶವನ್ನು ಬಳಸಿಕೊಂಡಿದ್ದಕ್ಕೆ ತಮ್ಮ ವಿದ್ಯಾರ್ಥಿವೃಂದಕ್ಕೆ ಕೃತಜ್ಞತೆ ಸೂಚಿಸಿದರು. ಇಕೋ ಕ್ಲಬ್ ಸಂಚಾಲಕ ಕಿರಣ ಪ್ರಭು ನಿರ್ವಹಿಸಿದರು. ಹಿರಿಯ ಸ್ಟಾಫ್ ನರ್ಸ ಶೋಭಾ ಗುನಗಾ, ಆಶಾ ಕಾರ್ಯಕರ್ತೆ ಅಂಕಿತಾ ಅರುಣ ನಾಯ್ಕ ನೆರವಾದರು.