ಕುಮಟಾ: ಮಕ್ಕಳ ಮೇಲೆ ಅತಿಯಾದ ಶಿಸ್ತು ಹೇರುವುದರಿಂದ ಇಲ್ಲವೇ ತೀವ್ರವಾಗಿ ಮುದ್ದು ಮಾಡುವುದರಿಂದ ಅವರಲ್ಲಿ ನಕಾರಾತ್ಮಕ ಧೋರಣೆ ಬೆಳೆಯುವ ಅಪಾಯವಿದೆ ಎಂಬುದನ್ನು ಪೋಷಕರು ಅರಿಯಬೇಕು ಎಂದು ಮಾನವತಾವಾದಿ ಮತ್ತು ಚಿಂತಕ ಜಯದೇವ ಬಳಗಂಡಿ ಅಭಿಪ್ರಾಯಪಟ್ಟರು. ಅವರು ಇಲ್ಲಿಯ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಪಾಲಕ-ಶಿಕ್ಷಕ-ಬಾಲಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಬದಲಾದ ಶಾಲೆಗಳ ಪಠ್ಯಕ್ರಮ, ಪೋಷಕರ ಜೀವನಶೈಲಿ, ಹೆಚ್ಚುತ್ತಿರುವ ಒತ್ತಡ ಇವೇ ಮೊದಲಾದ ಕಾರಣಗಳಿಗಾಗಿ ಪಾಲನೆ ಎನ್ನುವುದು ಈಗ ನಿಜಕ್ಕೂ ಒಂದು ಸವಾಲಿನ ಸಂಗತಿಯಾಗಿದೆ. ತಾಂತ್ರಿಕತೆಯ ಮೇಲಿನ ಅವಲಂಬನೆ ಹೆಚ್ಚಾಗುತ್ತಿದ್ದಂತೆ ಭಾವನೆಗಳಿಗೆ ಬೆಲೆಯೇ ಇಲ್ಲದಂತಾಗಿದೆ ಇದು ಮಕ್ಕಳ ಬೆಳವಣಿಗೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದರಲ್ಲದೇ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರಷ್ಟೇ ಜವಾಬ್ದಾರಿ ಪೋಷಕರ ಮೇಲೂ ಇದ್ದು ಬೀಜ ಬಿತ್ತಿ ಸಸಿ ಪಾಲನೆ ಮಾಡಿ ವೃಕ್ಷಾಫಲವನ್ನು ಹೇಗೆ ಪಡೆಯಬಲ್ಲೆವೋ ಹಾಗೆಯೇ ಮಕ್ಕಳನ್ನು ಪೋಷಿಸಬೇಕೆಂದು ಹಿತವಚನ ನೀಡಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಮುಖ್ಯಾಧ್ಯಾಪಕ ಎನ್.ಆರ್.ಗಜು ಮಕ್ಕಳು ತಮ್ಮ ವಯಸ್ಸಿನಲ್ಲಿ ತಪ್ಪು ಮಾಡುವುದು ಸಹಜ. ಅಂತಹ ತಪ್ಪುಗಳನ್ನು ಬಾಲ್ಯದಲ್ಲಿ ನಾವು ಮಾಡಿದ್ದೇವೆ ಎಂಬುದನ್ನು ಪೋಷಕರು ಮರೆಯಬಾರದು. ನಮ್ಮ ಕೆಲಸಗಳಲ್ಲಿ ನಾವು ಎಷ್ಟೇ ಮಗ್ನರಾಗಿದ್ದರೂ ಮಕ್ಕಳಿಗಾಗಿಯೇ ಒಂದಿಷ್ಟು ಸಮಯ ಮೀಸಲಿಡುವುದು ಅವಶ್ಯಕ ಅಲ್ಲದೇ ಶಾಲೆಗೆ ಸೇರಿಸಿದಾಕ್ಷಣ ತಮ್ಮ ಕರ್ತವ್ಯ ಮುಗಿಯಿತು ಎಂದು ಪೋಷಕರು ಭಾವಿಸುವುದು ಸರಿಯಲ್ಲ. ಮಕ್ಕಳ ಹಿನ್ನೆಡೆಗೆ ಶಾಲೆಯೆ ಕಾರಣ ಎಂದು ಶಾಲೆಯನ್ನು ಶಿಕ್ಷಕರನ್ನು ಮಕ್ಕಳ ಎದುರೇ ದೂಷಿಸಿದರೆ ಶಾಲೆಯ ಬಗ್ಗೆ ಮಕ್ಕಳಿಗೆ ಪ್ರೀತಿ ಮತ್ತು ಗೌರವ ಇಲ್ಲದಂತಾಗುತ್ತದೆ ಎಂದು ಸಮಾರೋಪದ ನುಡಿಗಳನ್ನಾಡಿದರು.
ಮಕ್ಕಳ ಮಾನಸಿಕ ಹಾಗೂ ದೈಹಿಕ ಬದಲಾವಣೆ ಮತ್ತು ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಸಿ ಇಂತಹ ಸಮಸ್ಯೆಗಳಿಗೆ ಸೂಕ್ತ ಪರಿಹಾರವನ್ನು ಮಕ್ಕಳಾದವರು ಪಾಲಕರಿಂದ ನಿರೀಕ್ಷಿಸುತ್ತಾರೆ ಎಂದು ವಿದ್ಯಾರ್ಥಿ ಪ್ರತಿನಿಧಿ ಪ್ರಣೀತ ಕಡ್ಲೆ ವಿದ್ಯಾರ್ಥಿಗಳ ಪರವಾಗಿ ಸದೀಚ್ಛೆಯನ್ನು ವ್ಯಕ್ತಪಡಿಸಿದರು.
ಶಿಕ್ಷಕ ಅನಿಲ್ ರೊಡ್ರಿಗಸ್ ಮಕ್ಕಳ ಪ್ರಗತಿಯನ್ನು ವಿಶ್ಲೇಷಿಸಿದರು. ಹಿರಿಯ ಶಿಕ್ಷಕ ವಿಷ್ಣು ಭಟ್ಟ ಸ್ವಾಗತಿಸಿದರು. ಎಲ್ಲ ವಿಷಯ ಶಿಕ್ಷಕರು ವಯಕ್ತಿಕವಾಗಿ ಪಾಲಕರೊಂದಿಗೆ ಚರ್ಚಿಸಿ ಮಕ್ಕಳ ಕಲಿಕಾ ನ್ಯೂನತೆಗೆ ಪರಿಹಾರ ಸೂಚಿಸಿದರು. ಪ್ರಾರಂಭದಲ್ಲಿ ಕುಮಾರಿಯರಾದ ಸೌಂದರ್ಯಾ, ಸ್ನೇಹಾ ಮತ್ತು ಅನುಷಾ ಪ್ರಾರ್ಥಿಸಿದರು. ಶಿಕ್ಷಕ ಕಿರಣ ಪ್ರಭು ವಂದಿಸಿದರು.