ಕೇಂದ್ರ ಸರ್ಕಾರದ ಲಕ್ಷ್ಯ ಸೆಳೆಯುವ ಉದ್ದೇಶದಿಂದ ದೇಶಾದ್ಯಂತದಿಂದ ಲಕ್ಷ ಮಂದಿ ರೈತರು ತಮ್ಮ ವಿವಿಧ ಬೇಡಿಕೆಗಳೊಂದಿಗೆ ದೆಹಲಿಗೆ ಬಂದಿದ್ದಾರೆ. ಬೆಳೆಗೆ ಅಧಿಕ ಬೆಲೆ, ಬೆಳೆ ಸಾಲ ಮನ್ನಾ, ಸ್ವಾಮಿನಾಥನ್ ಸಮಿತಿಯ ವರದಿಯ ಅನುಷ್ಠಾನ ಇವರ ಪ್ರಮುಖ ಬೇಡಿಕೆಗಳಾಗಿವೆ. ಶುಕ್ರವಾರ ಪಾರ್ಲಿಮೆಂಟ್ ಸ್ಟ್ರೀಟ್‌ನಲ್ಲಿ ಇವರು ಪ್ರತಿಭಟನಾ ಮೆರವಣಿಗೆ ನಡೆಸಲಿದ್ದಾರೆ.
ಒಡಿಶಾ, ಹರ್ಯಾಣ, ರಾಜಸ್ಥಾನ, ಮಹರಾಷ್ಟ್ರ, ಕರ್ನಾಟಕ ಹೀಗೆ ವಿವಿಧ ರಾಜ್ಯಗಳಿಂದ ಕೃಷಿ ಕಾರ್ಮಿಕರು, ಕೃಷಿಕರು ರಾಮಲೀಲಾ ಮೈದಾನದಲ್ಲಿ ಒಟ್ಟುಗೂಡಿದ್ದಾರೆ. ಯೋಗೇಂದ್ರ ಯಾದವ್ ಅವರ ಸ್ವರಾಜ್ ಇಂಡಿಯಾದ ಚಲೋ ದಿಲ್ಲಿ ಅಭಿಯಾನವೂ ಇದಕ್ಕೆ ಕೈಜೋಡಿಸಿದೆ. ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್, ಪತ್ರಕರ್ತ ಪಿ.ಸಾಯಿನಾಥ್ ಕೂಡಾ ಈ ರಾಲಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ರೈತರ ಸ್ಥಿತಿ ಹಿಂದೆಂದಿಗಿಂತಲೂ ಕಳವಳಕಾರಿಯಾಗಿದೆ ಎಂದು ಇವರು ಹೇಳಿದ್ದಾರೆ.
ಆಲ್ ಇಂಡಿಯಾ ಕಿಸಾನ್ ಸಂಘರ್ಷ ಕಾರ್ಡಿನೇಶನ್ ಕಮಿಟಿ (ಎಐಕೆಎಸ್‌ಸಿಸಿ) ಈ ಪ್ರತಿಭಟನೆಯ ನೇತೃತ್ವ ವಹಿಸಿದೆ. ಗುರುವಾರ ರಾತ್ರಿ ಪೂರ್ತಿ ರಾಮಲೀಲಾಲ ಮೈದಾನದಲ್ಲಿ ಕಳೆದಿರುವ ಈ ರೈತರು ದಂಡು ರೈತ ವಿರೋಧಿ ನೀತಿಯನ್ನು ಪ್ರತಿಭಟಿಸಿ ರಾಮಲೀಲಾ ಮೈದಾನದಿಂದ ಮೆರವಣಿಗೆ ಹೊರಡಲಿದ್ದು, ಸಂಸತ್ ಭವನದ ಬಳಿಗೆ ಹೋಗಲಿದೆ.