ಕುಮಟಾ : ಕೊಂಕಣ ಎಜ್ಯುಕೇಶನ್ ಟ್ರಸ್ಟನ ರೌಪ್ಯ ಮಹೋತ್ಸವದ ಅಂಗವಾಗಿ ದಿ. ಶ್ರೀ ಬಿ.ಕೆ. ಭಂಡಾರಕರ ಸ್ಮರಣಾರ್ಥ ನಡೆದ ಜ್ಞಾನಮೃತ ಎಂಬ ಎಸ್.ಎಸ್.ಎಲ್.ಸಿ ವ್ಯಾಸಂಗ ಮಾಡುತ್ತಿರುವ ಉತ್ತರ ಕನ್ನಡ ಜಿಲ್ಲೆಯ ಆಹ್ವಾನಿತ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ ಮತ್ತು ವಿದ್ಯಾರ್ಥಿ ಮಾರ್ಗದರ್ಶನ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಸಂಪನ್ನವಾಯಿತು.

ಬೆಳಗಿನಿಂದ ಪ್ರಾರಂಭವಾದ ಕಾರ್ಯಕ್ರಮದಲ್ಲಿ 85ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದರು. ಕಾರ್ಯಕ್ರಮ ಉದ್ಘಾಟಿಸಿದ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಯವರು ದೀಪ ಪ್ರಜ್ವಲಿನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಜ್ಞಾನದ ಜೊತೆಗೆ ಅಮೃತವನ್ನು ನೀಡುವ ಕಾರ್ಯ ಮಾಡುತ್ತಿದೆ. ಇಂದಿನ ಕಾರ್ಯಕ್ರಮದಲ್ಲಿ ರಸಪ್ರಶ್ನೆಯ ಜೊತೆಗೆ ಪ್ರಶ್ನೆಗೆ ರಸವತ್ತಾದ ಅಂಶಗಳು ಸೇರಿದೆ ಎಂದರು.
ಇಂದಿನ ಯುಗ ಸ್ಮರ್ಧಾತ್ಮಕ ಯುಗವಾಗಿದ್ದು ಪ್ರಪಂಚದ ಎಲ್ಲಾ ವಿಷಯಗಳನ್ನೂ ನಾವು ತಿಳಿದಿರಬೇಕು.

ಜಗತ್ತಿನ ಎಲ್ಲವನ್ನು ತಿಳಿದಿರುವ ನಮಗೆ ನಮ್ಮ ಪಕ್ಕದಲ್ಲಿರುವ ನದಿಗಳ ಬಗ್ಗೆಯೇ ನಾವು ತಿಳಿದಿರುದಿಲ್ಲ ಎಂಬುದು ಬೇಸರ. ನಮ್ಮ ತಂದೆ. ಅಜ್ಜ, ಮುತ್ತಜ್ಜನ ಬಗ್ಗೆ ನಾವು ತಿಳಿಯಬೇಕು. ನಮ್ಮತನವನ್ನು ನಾವು ತಿಳಿದರೆ ನಾವು ಎಲ್ಲವನ್ನು ತಿಳಿಯಬಹುದು ಎಂದು ಅಭಿಪ್ರಾಯಪಟ್ಟರು.

ಮಕ್ಕಳನ್ನು ಯಾವ ರೀತಿಯಲ್ಲಿ ನಾವು ಸೋಮಾರಿಗಳನ್ನಾಗಿ ಮಾಡುತ್ತಿದ್ದೇವೆ ಎಂಬ ಬಗ್ಗೆ ಕಥನದ ಮೂಲಕ ವಿವರಿಸಿದ ಸ್ವಾಮೀಜಿಯವರು ಸರಕಾರ ಬೇರೆ ಬೇರೆ ಭಾಗ್ಯವನ್ನು ನೀಡುವ ಮೂಲಕ ಜನರನ್ನು ಸೋಮಾರಿಯಾಗಿ ಮಾಡಿದೆ. ಶಿಕ್ಷಕರು ಸೋಮಾರಿಯಾಗಿ ಮಕ್ಕಳಿಗೆ ಜ್ಞಾನ ಕೊಡುವ ಬಗ್ಗೆ ಚಿಂತನೆಯೆ ನಡೆಸುತ್ತಿಲ್ಲ.

ಪ್ರತೀ ಮಕ್ಕಳನ್ನು ತನ್ನ ಮಗುವಂತೆ ಕಾಣುವಂತಾದಾಗ ಮಾತ್ರ ಶಿಕ್ಷಕನಾಗುವ ಯೋಗ್ಯತೆ ಬರುತ್ತದೆ. ಉತ್ತರ ಕನ್ನಡ ಜಿಲ್ಲೆಗೆ ಅವಕಾಶ ಕಡಿಮೆಯಾಗುವುದನ್ನು ಅನೇಕ ಬಾರಿ ನಾವು ಗಮನಿಸುತ್ತೇವೆ. ಇದಕ್ಕೆ ಕಾರಣ ಏನು ಎಂಬ ಬಗ್ಗೆಯೂ ಚರ್ಚೆ ನಡೆಸಬೇಕಾಗಿದೆ. ಇಂತಹ ಕಾರ್ಯಕ್ರಮಗಳ ಜೊತೆಗೆ ಹಾಗೂ ಕೊಂಕಣ ಎಜ್ಯುಕೇಶನ ಜೊತೆಗೆ ಸದಾ ಇದ್ದು ಇಂತಹ ಕಾರ್ಯಕ್ರಮ ಮಾಡುತ್ತೇವೆ ಎಂದರು.

RELATED ARTICLES  ಇಂದಿನ(ದಿ-29/01/2019) ಉತ್ತರಕನ್ನಡ ಜಿಲ್ಲೆಯ ಪ್ರಮುಖ ತಾಲೂಕುಗಳ ಅಡಿಕೆ ಧಾರಣೆ

ಶಿಕ್ಷಣದ ಜೊತೆಗೆ ಕ್ರೀಡೆಗೂ ಮಹತ್ವ ಬರಬೇಕು ಜಾತಿ, ಮತ, ಪಂಥವನ್ನು ಮೀರಿ ಬೆಳೆಯುವ ಕಾರ್ಯ ಆಗುವುದು ಕ್ರೀಡೆಯಲ್ಲಿ ಮಾತ್ರ, ರಾಷ್ಟ್ರಮಟ್ಟದಲ್ಲಿ ಅಂತರಾಷ್ಟ್ರಮಟ್ಟದಲ್ಲಿ ಕ್ರೀಡೆಯಲ್ಲಿ ಬಹುಮಾನ ಗೆದ್ದಾಗ ದೇಶದ ಬಾವುಟ ಎತ್ತುವ ಆ ಸಂದರ್ಭ ಮತ್ತೆ ಮತ್ತೆ ಬರಬೇಕು ಎಂದರು. ಶಿಕ್ಷಣ ಪಡೆಯುವಾಗ ಮುಂದೆ ಏನಾಗಬೇಕು ಎಂಬ ಬಗ್ಗೆ ಧೃಢ ಸಂಕಲ್ಪಕ್ಕೆ ಮಾರ್ಗಸೂಚಿ ಬೇಕು ಎಂದರು.

ಕಾರ್ಯಕ್ರಮದ ಕುರಿತಾಗಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿಗಳಾದ ಮುರಳೀಧರ ಪ್ರಭುರವರು ಮಾತನಾಡಿ ದಿ. ಶ್ರೀ ಬಿ.ಕೆ. ಭಂಡಾರಕರ (ಬಂಟ್ವಾಳ ಕೃಷ್ಣ ಭಂಡಾರಕರ ಇವರು ಮಾರ್ಚ್ 9 1931ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಡ್ವಾಳದ ದಿ. ಶ್ರೀ ಕೊಗ್ಗ ಭಂಡಾರಕರ ಹಾಗೂ ದಿ. ಶ್ರೀಮತಿ ನೇತ್ರಾವತಿ ಭಂಡಾರಕರರವರ ಸುಪುತ್ರರಾಗಿ ಜನಿಸಿದರು. ಪಿಯುಸಿ. ಶಿಕ್ಷಣ ಪೂರೈಸಿದ ಬಳಿಕ ತಮ್ಮ 19ನೇ ವಯಸ್ಸಿನಲ್ಲಿ ಯುಕೆಟಿ ಕಂಪನಿಯ ವ್ಯವಸ್ಥಾಪಕರಾಗಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿಗೆ ನಿಯುಕ್ತಿಯಾದರು. 1958ರಲ್ಲಿ ಜಿಲ್ಲೆಯಲ್ಲಿ ಸ್ವಂತ ಟ್ರಾನ್ಸ್ ಪೋರ್ಟ್ ಹಾಗೂ ಆಟೋ ಸ್ಟೋರ್ ಆರಂಭಿಸಿ ಯಶಸ್ವಿ ಉದ್ಯಮಿಯೆನಿಸಿದರು. ಸಾಮಾಜಿಕ ಸೇವೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡ ಇವರು ಕೊಂಕಣ ಎಜ್ಯುಕೇಶನ್ ವಿಶ್ವಸ್ಥರಾಗಿ, ಉಪಧ್ಯಕ್ಷರಾಗಿ, ಮುಂದೆ ಅಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸಿದರು. ಶಿಕ್ಷಣ ಪ್ರೇಮಿಗಳು, ಕೊಡುಗೈ ದಾನಿಗಳೂ ಆದ ಇವರು ಅನೇಕ ಜನಪರ ಕಾರ್ಯಕ್ರಮಗಳಿಗೆ ಉದಾರ ದಾನವನ್ನು ಮಾಡಿ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಯಾಗಿದ್ದಾರೆ. ಶ್ರೀಯುತರು ದಿನಾಂಕ 16-09-2014 ರಂದು ಇಹಲೋಕವನ್ನು ತ್ಯಜಿಸಿದರು. ಸಂಸ್ಥೆಯ ರೌಪ್ಯ ಮಹೊತ್ಸವ ವರ್ಷದ ಈ ಸಂದರ್ಭದಲ್ಲಿ ದಿವಂಗರ ಸ್ಮರಣಾರ್ಥ ಜ್ಞಾನಾಮೃತ ರಸಪ್ರಶ್ನೆ ಕಾರ್ಯಕ್ರಮವನ್ನು ಸಂಸ್ಥೆಯು ಆಯೋಜಿಸಿದೆ. ದಿವಂಗತ ಶ್ರೀ ಬಿ.ಕೆ. ಭಂಡಾರಕರ ರವರು ಶಿಕ್ಷಣದ ಬಗ್ಗೆ ಉದಾತ್ತ ಚಿಂತನೆ ಹೊಂದಿದ್ದರು. ನಮ್ಮ ಜಿಲ್ಲೆಯ ವಿದ್ಯಾರ್ಥಿಗಳು ಸ್ಮರ್ಧಾತ್ಮಕ ಯುಗಕ್ಕೆ ತಮ್ಮನ್ನು ತಾವು ತೆರೆದುಕೊಂಡು ಹೆಚ್ಚು ಹೆಚ್ಚು ಜ್ಞಾನದ ಜೊತೆಗೆ ಕೌಶಲ್ಯವನ್ನು ಗಳಿಸಬೇಕೆಂಬ ಹಂಬಲವನ್ನು ಹೊಂದಿದ್ದರು. ನಮ್ಮ ಜಿಲ್ಲೆಯ ವಿದ್ಯಾರ್ಥಿಗಳು ಪ್ರತಿಭಾವಂತರಿದ್ದರೂ ಸ್ಮರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಕೌಶಲದ ಕೊರತೆಯನ್ನು ಎದುರಿಸುತ್ತಿರುವದು ಎಲ್ಲೆಡೆಯೂ ಕಂಡುಬರುತ್ತಿದೆ. ಈ ನಿಟ್ಟಿನಲ್ಲಿ ಅವರನ್ನು ಹುರಿದುಂಬಿಸಿ ಅವರಲ್ಲಿ ಹೆಚ್ಚಿನ ಜ್ಞಾನವನ್ನು ಒದಗಿಸಿ ಭವಿಷ್ಯದ ಸ್ಮರ್ಧಾತ್ಮಕ ಪರೀಕ್ಷೆಗಳಿಗೆ ಅವರನ್ನು ಅಣಿಗೊಳಿಸುವ ಸಣ್ಣ ಪ್ರಯತ್ನ ನಮ್ಮದಾಗಿದೆ. ಇದರೊಂದಿಗೆ ಎಸ್.ಎಸ್.ಎಲ್.ಸಿ ಫಲಿತಾಂಶವು ಜಿಲ್ಲಾ ಮಟ್ಟದಲ್ಲಿ ಉತ್ತಮವಾಗಿದ್ದರೂ ತೃಪ್ತಿಕರವಾಗಿಲ್ಲದ ಕಾರಣ ಜಿಲ್ಲೆಯ ಆಯ್ದ ವಿದ್ಯಾರ್ಥಿಗಳಿಗೆ ಈ ನಿಟ್ಟಿನಲ್ಲಿ ವಿಶೇಷ ತರಬೇತಿಯನ್ನು ನೀಡಿ ಅವರನ್ನು ಉತ್ತೇಜಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದರು.

RELATED ARTICLES  ಉತ್ತರ ಕನ್ನಡದ ಪ್ರಮುಖ ತಾಲೂಕಿನಲ್ಲಿ ಇಂತಿದೆ ಕೊರೋನಾ

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಕಿರಣ ಫರ್ನಾಂಡಿಸ್ ವಿದ್ಯಾರ್ಥಿಗಳಿಗೆ ಸಮಯ ಹೊಂದಾಣಿಕೆ ಬಗ್ಗೆ ಮಾರ್ಗದರ್ಶನ ಮಾಡಿದರು.

IMG20181130162135
ನಂತರ ನಡೆದ ರಸಪ್ರಶ್ನೆ ಸ್ಪರ್ಧೆಯಲ್ಲಿ ಶಿರಸಿಯ ಲಯನ್ಸ ಸಂಸ್ಥೆಯ ವಿದ್ಯಾರ್ಥಿಗಳಾದ ಪ್ರಜ್ವಲ ಭಟ್ಟ,ಅರವಿಂದ ನಾಯ್ಕ,ವಿಭಾ ಹೆಗಡೆಯವರ ತಂಡ ಪ್ರಥಮ ಸ್ಥಾನ ಪಡೆದರು. ವರುಣ ಹೆಗಡೆ,ಸಂಕಲ್ಪಾ ನಾಯಕ,ಪ್ರಮೋದ ನಾಯ್ಕ ಅವರ ಸಿ.ವಿ.ಎಸ್.ಕೆ ತಂಡ ದ್ವಿತೀಯ ಸ್ಥಾನ ಪಡೆಯಿತು. ಮಹಾತ್ಮಾ ಗಾಂಧಿ ಹೈಸ್ಕೂಲ್ ನ ವಿದ್ಯಾರ್ಥಿಗಳಾದ ಪ್ರಣೀತ ಕಡ್ಲೆ, ವಿಶ್ವಾಸ ವಿ ಪೈ, ಶ್ರೀಧರ ವಿ.ಭಟ್ಟರವರ ತಂಡ ತ್ರತೀಯ ಸ್ಥಾನ ಪಡೆದರು.

ಬಿ.ಕೆ ಭಂಡಾರಕರ ಅವರ ಪುತ್ರ ಭರತ್ ಭಂಡಾರಕರ್ ಹಾಗೂ ವೈಷ್ಣವಿ ಭಂಡಾರಕರ ಬಹುಮಾನ ವಿತರಿಸಿದರು. ಚಿದಾನಂದ ಭಂಡಾರಿ ಸ್ವಾಗತಿಸಿದರೆ, ಸುಲೋಚನಾ ರಾವ್ ವಂದಿಸಿದರು, ರವಿಶಂಕರ್ ರಸಪ್ರಶ್ನೆ ಸ್ಪರ್ಧೆ ನಡೆಸಿದರೆ, ಗಣೇಶ ಜೋಶಿ ಕಾರ್ಯಕ್ರಮ ನಿರೂಪಿಸಿದರು.