ಕಾರವಾರ: ಡಿ.8, 9 ಹಾಗೂ 10ರಂದು ಆಯೋಜನೆಗೊಂಡಿರುವ ಕರಾವಳಿ ಉತ್ಸವದ ಪೋಸ್ಟರ್ ಅನ್ನು ಶನಿವಾರ ಬಿಡುಗಡೆ ಮಾಡಲಾಯಿತು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಉತ್ಸವದ ಮೊದಲನೇ ದಿನದ ಕಾರ್ಯಕ್ರಮಕ್ಕೆ ಇಂಡಿಯನ್ ಐಡಿಯಲ್ ಶೋನ ಮೊದಲ ಅವತರಣಿಕೆಯ ವಿಜೇತ ಅಭಿಜಿತ್ ಸಾವಂತ್, ಎರಡನೇ ದಿನದಂದು ಬಹುಭಾಷಾ ಸಂಗೀತಕಾರ ರಘು ದೀಕ್ಷಿತ್, ಮೂರನೇ ದಿನದಂದು ಹಿನ್ನೆಲೆ ಗಾಯಕಿ ನೀತಿ ಮೋಹನ್ ಪ್ರಮುಖ ಆಕರ್ಷಣೆಯಾಗಿದ್ದಾರೆ. ಎಂ.ಜೆ ಫೈವ್ ಡ್ಯಾನ್ಸ್ ಗ್ರೂಪ್ ಅವರಿಂದ ನೃತ್ಯ ವೈಭವ ಹಾಗೂ ಪ್ರಭಾತ್ ಕಲಾವಿದರು ಕರುನಾಡ ವೈಭವ ಕಾರ್ಯಕ್ರಮ ಇರಲಿದೆ ಎಂದು ತಿಳಿಸಿದರು.

ಉತ್ಸವದಲ್ಲಿ ಶೇ 70ರಷ್ಟು ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಲಾಗಿದೆ. ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ಮಣ್ಣಿನ ಮಡಿಕೆ ತಯಾರಿಕೆ, ಬಾಂಬೂ ವೀವಿಂಗ್, ರೈಸ್ ಗ್ರೇನ್ ಮೇಲೆ ಪೇಂಟಿಂಗ್ ಆಯೋಜನೆ ಮಾಡಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಕಾಂಪೌಂಡ್ ಮೇಲೆ ಮಕ್ಕಳಿಂದ ವಾಲ್ ಪೇಂಟಿಂಗ್ ಮಾಡಿಸಲಾಗುವುದು ಎಂದು ತಿಳಿಸಿದರು.

RELATED ARTICLES  ದ - ಬಿಕನಿ ಕಿಲ್ಲರ್ ಚಾರ್ಲ್ಸ್ ಶೋಭರಾಜ ಕೃತಿಯ ಲೋಕಾರ್ಪಣೆ.

ಉಳಿದಂತೆ ಡಾಗ್ ಶೋ, ಕಿಚನ್ ಕ್ವೀನ್, ಹಗ್ಗ ಜಗ್ಗಾಟ, ಕಬಡ್ಡಿಯನ್ನು ಹಮ್ಮಿಕೊಳ್ಳಲಾಗಿದೆ. ಬೀಚ್ ಮ್ಯಾರಾಥಾನ್ ನಲ್ಲಿ 1,500 ಸಾವಿರ ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ ಇದೆ. ಇದರೊಂದಿಗೆ ಮೂರು ಕಿ.ಮೀ. ಫ್ಯಾಮಿಲಿ ರನ್ ಅನ್ನೂ ಕೂಡ ಆಯೋಜಿಸಲಾಗಿದೆ. ಮ್ಯಾರಾಥಾನ್ ಗೆ ಅರ್ಜುನ ಪ್ರಶಸ್ತಿ ವಿಜೇತ ಹಾಗೂ ಪ್ರೊ ಕಬಡ್ಡಿ ತರಬೇತುದಾರ ಬಿ.ಸಿ.ರಮೇಶ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಮೈಸೂರು ದಸರಾದಲ್ಲಿ ನಡೆಯುವಂತೆ ಪಂಜಿನ ಮೆರವಣಿಗೆ ಹಾಗೂ ಸೇನೆಯವರಿಂದ ಬೈಕ್ ಡ್ರಿಲ್ ಅನ್ನು ಆಯೋಜಿಸಲು ತೀರ್ಮಾನಿಸಿದ್ದೆವು. ಆದರೆ, ಈ ತಂಡಗಳಿಗೆ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮುಂದಿನ ವರ್ಷ ಆಯೋಜಿಸಲಾಗುವುದು ಎಂದು ತಿಳಿಸಿದರು.

RELATED ARTICLES  ಶಿಕ್ಷಕರು ಮಕ್ಕಳ ಭವಿಷ್ಯರೂಪಿಸುವ ಶಿಲ್ಪಿಗಳು

ಇನ್ನು ಹೊಸ ಯೋಚನೆ ಎಂಬಂತೆ ಜಿಲ್ಲಾ ರಂಗಮಂದಿರದಲ್ಲಿ ಮೊದಲ ದಿನ ಪದ್ಮಶ್ರೀ ಗಿರೀಶ್ ಭಾರಧ್ವಜ್, ಎರಡನೇ ದಿನ ಪವಾಡ ಬಯಲು ತಜ್ಞ ಹುಲೇಕಲ್ ನಟರಾಜ್, ಮೂರನೇ ದಿನ ಪದ್ಮಶ್ರೀ ಮಾಲತಿ ಹೊಳ್ಳ ಅವರಿಂದ ಸ್ಪೂರ್ತಿದಾಯಕ ಭಾಷಣ ನಡೆಯಲಿದೆ ಎಂದು ತಿಳಿಸಿದರು.

ಇನ್ನು, ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದ ಹೆದ್ದಾರಿಯಲ್ಲಿ ಡಿ.10ರಂದು ಬೈಕ್ ಸ್ಟಂಟ್ ಶೋ, ಜಿಲ್ಲಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಎಂ.ರೋಶನ್ ಅವರ ಅಧ್ಯಕ್ಷತೆಯಲ್ಲಿ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಕಾರವಾರ-ಅಂಕೊಲಾ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀಮತಿ ರೂಪಾಲಿ ಎಸ್. ನಾಯ್ಕ, ಜಿಲ್ಲಾ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಎಂ.ರೋಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸುರೇಶ್ ಇಟ್ಬಾಳ್ ಹಾಜರಿದ್ದರು.