ಕುಮಟಾ: ಕೇವಲ ಪಠ್ಯಪುಸ್ತಕ ಓದಿ, ಶ್ರೇಯಾಂಕ ಗಿಟ್ಟಿಸಿ ನೌಕರಿ ಹಿಡಿಯುವುದೊಂದೇ ಬದುಕಿನ ಗುರಿಯಾಗಬಾರದು. ದೈಹಿಕ ಚಟುವಟಿಕೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಆರೋಗ್ಯ ಹಾಗೂ ಸದೃಢ ಜೀವನ ನಡೆಸಬಹುದೆಂದು ರಾಮನಾಥ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಮತ್ತು ಉದ್ಯಮಿ ಶ್ರೀಧರ ಶೆಟ್ಟಿ ಅಭಿಪ್ರಾಯಪಟ್ಟರು.
ಅವರು ಇಲ್ಲಿಯ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಮಹಾತ್ಮಾ ಗಾಂಧಿ ಪ್ರೌಢಶಾಲೆಯ 52 ನೆಯ ವಾರ್ಷಿಕ ಕ್ರೀಡಾಕೂಟವನ್ನು 100 ಮೀಟರ್ ಓಟದ ಸ್ಫರ್ಧೆಗೆ ಚಾಲನೆ ನೀಡುವುದರ ಮೂಲಕ ಉದ್ಘಾಟಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಅಧ್ಯಕ್ಷತೆಯನ್ನು ವಹಿಸಿದ್ದ ಮುಖ್ಯಾಧ್ಯಾಪಕ ಎನ್.ಆರ್. ಗಜು ದೈಹಿಕ ಶಿಕ್ಷಕ ಲಕ್ಷ್ಮಣ ಅಂಬಿಗರ ನೇತೃತ್ವದಲ್ಲಿ ಶಾಲೆ ಕ್ರೀಡಾ ಸ್ಪರ್ಧೆಗಳಲ್ಲಿ ಸಾಧಿಸಿದ ಸಾಧನೆಗಳನ್ನು ಶ್ಲಾಘಿಸಿದರು.
ಶಿಕ್ಷಕರಾದ ವಿಷ್ಣು ಭಟ್ಟ, ಎಸ್.ಪಿ.ಪೈ, ಅನಿಲ್ ರೊಡ್ರಿಗಸ್, ಕಿರಣ ಪ್ರಭು, ಪ್ರದೀಪ ನಾಯ್ಕ, ಕೆ.ಎಸ್.ಅನ್ನಪೂರ್ಣ ವಿವಿಧ ಕ್ರೀಡಾಸ್ಪರ್ಧೆಗಳನ್ನು ಕ್ರೀಡಾಸ್ಪೂರ್ತಿಯಿಂದ ನಿಂತು ನಡೆಸಿಕೊಟ್ಟರು. ಶಾಲೆಯ ನಿವೃತ್ತ ದೈಹಿಕ ಶಿಕ್ಷಕ ಎಂ.ಆರ್.ಹೆಗಡೆ ಸೇರಿದಂತೆ ಅನೇಕ ಮಹನೀಯರು ವಿಜೇತ ಕ್ರೀಡಾಳುಗಳಿಗೆ ನೀಡುತ್ತಿರುವ ಬಹುಮಾನವನ್ನು ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದಂದು ವಿತರಿಸಲಾಗುವುದೆಂದು ಈ ಸಂದರ್ಭದಲ್ಲಿ ಪ್ರಕಟಿಸಲಾಯಿತು.