ದೆಹಲಿ: ಖಾಸಗಿ ಕಂಪನಿಗಳು ಆಧಾರ್ ದೃಢೀಕರಣ ಮಾಡದಂತೆ ಸುಪ್ರೀಂ ಕೋರ್ಟ್ ನಿರ್ಬಂಧಿಸಿದ ಬಳಿಕ ಆಧಾರ್ ನೋಂದಣಿ ಹಾಗೂ ದೃಢೀಕರಣಗಳು ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ.
ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ (ಯುಐಡಿಎಐ) ಆನ್ಲೈನ್ ಡ್ಯಾಶ್ಬೋರ್ಡ್ ನಲ್ಲೇ ಈ ಅಂಕಿಅಂಶ ಉಲ್ಲೇಖವಾಗಿದೆ. ನವೆಂಬರ್ ತಿಂಗಳಲ್ಲಿ ಕೇವಲ 8,66,000 ಆಧಾರ್ ಗಳಷ್ಟೇ ನೋಂದಣಿಯಾಗಿವೆ. ಇದು 2018ರಲ್ಲೇ ಅತಿ ಕಡಿಮೆ ನೋಂದಣಿ ಪ್ರಮಾಣವಾಗಿದೆ. ಜನವರಿಯಲ್ಲಿ 74 ಲಕ್ಷ ಮಂದಿ ನೋಂದಣಿ ಮಾಡಿಸಿಕೊಂಡಿದ್ದರೆ, ಅಕ್ಟೋಬರ್ ನಲ್ಲಿ 22 ಲಕ್ಷ ಮಂದಿ ನೋಂದಣಿ ಮಾಡಿಸಿಕೊಂಡಿದ್ದರು.
ಆಧಾರ್ ಉಪಯೋಗಿಸಿಕೊಂಡು ದೃಢೀಕರಣ ಮಾಡಿಸಿಕೊಂಡವರ ಸಂಖ್ಯೆಯೂ ಶೇ.27ರಷ್ಟು ಕುಸಿತ ಕಂಡಿದೆ. ಮಾರ್ಚ್ ನಲ್ಲಿ 112 ಕೋಟಿಯಷ್ಟಿದ್ದ ಪ್ರಮಾಣವು ನವೆಂಬರ್ ವೇಳೆಗೆ 82.4 ಕೋಟಿಗೆ ಇಳಿದಿದೆ ಎಂದು ವರದಿಯಾಗಿದೆ.
ಇಕೆವೈಸಿ ಉಪಯೋಗಿಸಿಕೊಂಡು ಆಧಾರ್ ಆಧಾರಿತ ದೃಢೀಕರಣವು ಮಾರ್ಚ್ ನಲ್ಲಿ 37 ಕೋಟಿಯಷ್ಟಿದ್ದಿದ್ದು, ನವೆಂಬರ್ ವೇಳೆಗೆ 15.4 ಕೋಟಿಗೆ ಇಳಿದಿದೆ. ಸರ್ಕಾರಿ ಸವಲತ್ತುಗಳಿಗಷ್ಟೇ ಆಧಾರ್ ದೃಢೀಕರಣಕ್ಕೆ ಅವಕಾಶ ನೀಡಿ ಸುಪ್ರೀಂಕೋರ್ಟ್ ಸೆ.26ರಂದು ತೀರ್ಪು ಹೊರಬಿದ್ದಿತ್ತು. ಬ್ಯಾಂಕ್ ಖಾತೆಗಳಿಗೆ ಕೂಡಾ ಆಧಾರ್ ಲಿಂಕ್ ಕಡ್ಡಾಯವಲ್ಲ ಎಂದು ಹೇಳಿತ್ತು.