ಕುಮಟಾ: ಯೋಗವು ದೇಹ ಮತ್ತು ಮನಸ್ಸನ್ನು ಸುಸ್ತಿತಿಯಲ್ಲಿಡಲು ಅತ್ಯುತ್ತಮ ಮಾರ್ಗವಾಗಿದೆ. ಮಕ್ಕಳ ಕಲಿಕಾ ಸಾಮಥ್ರ್ಯವನ್ನು ವೃದ್ಧಿಸುವಲ್ಲಿಯೂ ಕೂಡ ಯೋಗ ನೆರವಿಗೆ ಬರುತ್ತದೆ ಎಂದು ಪತಂಜಲಿ ಯೋಗ ಸಮಿತಿಯ ಸಂಚಾಲಕ ಧರ್ಮರಾಜ ರೇವಣಕರ ಅಭಿಪ್ರಾಯ ಪಟ್ಟರು.
ಅವರು ಇಲ್ಲಿಯ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಶಾಲಾವಧಿಯ ನಂತರ ಏರ್ಪಡಿಸಲಾಗಿದ್ದ ಒಂದು ವಾರ ಕಾಲದ ಪತಂಜಲಿ ಯೋಗ ತರಬೇತಿ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದರು. ಮತ್ತೊಬ್ಬ ಯೋಗಗುರು ಕೆ.ಜಿ.ಭಟ್ಟ ಮಾತನಾಡಿ, ಯೋಗವು ಮಕ್ಕಳ ದೇಹದ ಒಳಗಿನ ಅರ್ಥವನ್ನು ಅರಿಯಲು ನೆರವು ಮಾಡಿಕೊಡುತ್ತದೆ.
ಒಮ್ಮೆ ಅವರನ್ನು ಯೋಗಕ್ಕೆ ಪರಿಚಯಿಸಿದರೆ ಯಾವ ಮಕ್ಕಳು ಆತಂಕಕ್ಕೆ ಒಳಗಾಗಿರುತ್ತಾರೋ, ಅಂತವರು ಧ್ಯಾನ, ಉಸಿರಾಟ ಪ್ರಕ್ರಿಯೆಗಳಲ್ಲಿ ಸರಿಯಾಗಿ ತೊಡಗಿಸಿಕೊಂಡರೆ, ಅವರು ಅವರ ಒತ್ತಡದಿಂದ ಮುಕ್ತಿಪಡೆದು ಆರಾಮಾಗಿ ಜೀವಿಸಲು ಸಹಾಯಕವಾಗಲಿದೆ ಎಂದು ಯೋಗಾಭ್ಯಾಸ ನಡೆಸಿಕೊಡುವುದರ ಮೂಲಕ ಬೋಧಿಸಿದರು. ಇನ್ನೋರ್ವ ಯೋಗಗುರು ಶಿವಾನಂದ ಶೇಟ್, ಶಾಲೆಯ ದೈಹಿಕ ಶಿಕ್ಷಕ ಲಕ್ಷ್ಮಣ ಅಂಬಿಗ ಅಭ್ಯಾಸ ನಿರತರಿಗೆ ನೆರವಾದರು. ಪ್ರಾಣಾಯಾಮ, ಸೂರ್ಯನಮಸ್ಕಾರ, ಮೌನಧ್ಯಾನವೇ ಮೊದಲಾದ ಪ್ರಮುಖ ಪ್ರಾಕಾರಗಳ ಜೊತೆಗೆ ವಿವಿಧ ಆಸನಗಳನ್ನು ಪರಿಚಯಿಸಲಾಯಿತು.
ಯೋಗವು ಮಕ್ಕಳ ಅಧ್ಯಯನದ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಲು ನೆರವಾಗುವುದೆಂದು ಆ ಕಾರಣಕ್ಕಾಗಿಯೇ ಮಕ್ಕಳಿಗೆ ಯೋಗ ತರಬೇತಿಯಲ್ಲಿ ಪಾಲ್ಗೊಳ್ಳಲು ತಾವು ಅನುಮತಿಸಲು ಸಂತೋಷಿಸಿದ್ದೇನೆಂದು ಮುಖ್ಯಾಧ್ಯಾಪಕ ಎನ್.ಆರ್.ಗಜು ತಿಳಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಯೋಗಶಿಕ್ಷಕರಿಗೆ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳ ಪರವಾಗಿ ರಕ್ಷಿತಾ ಪಟಗಾರ, ಲಕ್ಷ್ಮೀಧರ ಗೌಡ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಹಿರಿಯ ಶಿಕ್ಷಕ ವಿಷ್ಣು ಭಟ್ಟ ಸ್ವಾಗತಿಸಿದರು. ಶಿಕ್ಷಕ ಎಸ್.ಪಿ.ಪೈ, ಕಿರಣ ಪ್ರಭು ಸಹಕರಿಸಿದರು.