ಚಿತ್ರಿಗಿ: ವಿಜ್ಞಾನ ಶಿಕ್ಷಕರ ಕಾರ್ಯಾಗಾರ ಸಂಪನ್ನ
ಕುಮಟಾ: ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ತಾಲೂಕಾ ವಿಜ್ಞಾನ ಶಿಕ್ಷಕರ ಸಂಘದಡಿ ಒಂದು ದಿನದ ವಿಜ್ಞಾನ ಶಿಕ್ಷಕರ ಕಾರ್ಯಾಗಾರ ಏರ್ಪಡಿಸಲಾಗಿತ್ತು. ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಹಿರಿಯ ಅಧ್ಯಾಪಕ ವಿಷ್ಣು ಭಟ್ಟ ಇಂತಹ ಕಾರ್ಯಾಗಾರಗಳು ಶಿಕ್ಷಕರನ್ನು ಸದಾ ವಿಷಯಾಧಾರಿತ ನವೀಕರಣ ಕ್ರಿಯೆಗೆ ತೆರೆದುಕೊಳ್ಳುವಂತೆ ಮಾಡುತ್ತದೆ ಎಂದು ಅಭಿಪ್ರಾಯಪಟ್ಟರು.
ಸರಕಾರಿ ಪ್ರೌಢಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ಎನ್.ನಾಯ್ಕ ವಿಜ್ಞಾನ ಶಿಕ್ಷಕರು ಅವರಲ್ಲಿರುವ ಸಂಶೋಧಕ ಬುದ್ಧಿಯಿಂದ ಇತರರಿಗಿಂತ ಭಿನ್ನವಾಗಿ ನಿಲ್ಲುತ್ತಾರೆ ಎಂದು ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು. ಮಾಧ್ಯಮಿಕ ಶಾಲಾ ನೌಕರರ ಸಂಘದ ತಾಲೂಕಾಧ್ಯಕ್ಷ ಅನಿಲ್ ರೊಡ್ರಿಗಸ್ ಎಸ್ಸೆಸ್ಸೆಲ್ಸಿಯಲ್ಲಿ ವಿದ್ಯಾರ್ಥಿಗಳು ವಿಜ್ಞಾನ ವಿಷಯದ ಬಗ್ಗೆ ಆಸಕ್ತಿ ಕಳೆದುಕೊಳ್ಳದಿರುವುದರಿಂದಲೇ ಕಡಿಮೆ ಅಂಕಗಳಿಸುತ್ತಿದ್ದು, ಶಿಕ್ಷಕರಾದವರು, ವೈಜ್ಞಾನಿಕ ಕೌಶಲ್ಯ ಬೆಳೆಸುವುದರ ಮೂಲಕ ಬುದ್ಧಿಗೆ ಪ್ರಚೋದನೆ ನೀಡಬೇಕೆಂದು ಕರೆ ನೀಡಿದರು.
ಕಾರವಾರದ ಸರಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಸಸ್ಯಶಾಸ್ತ್ರ ವಿಜ್ಞಾನ ಘಟಕದ ಮುಖ್ಯಸ್ಥ ಶಿವಾನಂದ ಭಟ್ಟ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ, ಅನುವಂಶೀಯ ವಿಜ್ಞಾನದ ಬಗ್ಗೆ ಮಹತ್ವದ ಮಾಹಿತಿ ನೀಡಿದರು. ಸಂಘದ ಕಾರ್ಯದರ್ಶಿ ಮಹಾದೇವ ಗೌಡ ಸ್ವಾಗತಿಸಿದರು. ಶಾಲೆಯ ಕಸ್ತೂರಬಾ ಇಕೋ ಕ್ಲಬ್ ಸಂಚಾಲಕ ಕಿರಣ ಪ್ರಭು ನಿರೂಪಿಸಿದರು. ಸೌದಂರ್ಯಾ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಸಂಘದ ಉಪಾಧ್ಯಕ್ಷೆ ಉಮಾ ಹೆಗಡೆ ವಂದಿಸಿದರು.