ಕಾರವಾರ: ಕರಾವಳಿ ಉತ್ಸವದ ಅಂಗವಾಗಿ ಭಾನುವಾರ ಇಲ್ಲಿನ ರವೀಂದ್ರನಾಥ್ ಟ್ಯಾಗೋರ್ ಕಡಲತೀರದಲ್ಲಿ ಆಯೋಜಿಸಲಾಗಿದ್ದ ಕರಾವಳಿ ರನ್ ಮ್ಯಾರಥಾನ್ ಸ್ಪರ್ಧೆಯಲ್ಲಿ ಸಾವಿರಾರು ಸ್ಪರ್ಧಿಗಳು ಉತ್ಸಾಹದಿಂದ ಪಾಲ್ಗೊಂಡರು.
ಆದಿತ್ಯಾ ಬಿರ್ಲಾ ಗ್ರಾಸಿಂ ಇಂಡಸ್ಟ್ರೀಸ್ ಪ್ರಾಯೋಜಕತ್ವದಲ್ಲಿ ಆಯೋಜಿಸಲಾಗಿದ್ದ ಮ್ಯಾರಾಥಾನ್ ಸ್ಪರ್ಧೆ ಮೂರು ವಿಭಾಗಗಳಲ್ಲಿ ನಡೆಯಿತು. 21 ಕಿ.ಮೀ., 10 ಕಿ.ಮೀ. ಮತ್ತು 3 ಕಿ.ಮೀ. ದೂರದ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಮ್ಯಾರಾಥಾನ್ ಉದ್ಘಾಟನೆಗೆ ಆಗಮಿಸಿದ್ದ ಬೆಂಗಳೂರು ಬುಲ್ಸ್ ಕಬಡ್ಡಿ ತಂಡದ ತರಬೇತುದಾರ ಬಿ.ಸಿ.ರಮೇಶ್ ಸ್ಪರ್ಧಾಳುಗಳನ್ನು ಉತ್ತೇಜಿಸಿದರು. ಮ್ಯಾರಾಥಾನ್ ಸ್ಪರ್ಧೆಯನ್ನು ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಅವರು ಮಾತನಾಡಿ, ಮ್ಯಾರಾಥಾನ್ ಸ್ಪರ್ಧೆಯು ಜನರಲ್ಲಿ ಕ್ರೀಡಾ ಮನೋಭಾವ ಬೆಳೆಯಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಆದಿತ್ಯಾ ಬಿರ್ಲಾ ಗ್ರಾಸಿಂ ಇಂಡಸ್ಟ್ರೀಸ್ ನ ಘಟಕ ವ್ಯವಸ್ಥಾಪಕ ಪಿ.ಬಿ.ದೀಕ್ಷಿತ್, ಕೈಗಾ ಅಣು ವಿದ್ಯುತ್ ಸ್ಥಾವರದ ಸಾರ್ವಜನಿಕ ಜಾಗೃತಿ ಅಧಿಕಾರಿ ಎಂ.ಶೇಷಯ್ಯ, ಕರ್ನಾಟಕ ನೌಕಾ ವಲಯ ಮುಖ್ಯಸ್ಥ ರಿಯರ್ ಅಡ್ಮಿರಲ್ ಕೆ.ಜೆ. ಕುಮಾರ್, ಶಾಸಕಿ ರೂಪಾಲಿ ನಾಯ್ಕ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೊಹಮ್ಮದ್ ರೋಶನ್ ಇದ್ದರು.