ಕುಮಟಾ: ಅಧ್ಯಯನದಲ್ಲಿ ದಡ್ಡನೆಂಬ ಹೆಡ್ಡ ಕೀಳರಿಮೆ ಬಿಟ್ಟು ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಂಡು ಧನಾತ್ಮಕ ಚಿಂತನೆ ಮೈಗೂಡಿಸಿಕೊಂಡರೆ ಉತ್ತಮ ವಿದ್ಯಾರ್ಥಿಯಾಗಿ ಹೊರಹೊಮ್ಮಲು ಸಾಧ್ಯವೆಂದು ಶಿವಮೊಗ್ಗದ ಪ್ರಸಿದ್ಧ ನರ ಮಾನಸಿಕ ವೈದ್ಯ ಡಾ.ಕೆ.ಆರ್.ಶ್ರೀಧರ ನುಡಿದರು. ಅವರು ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ವಿದ್ಯಾರ್ಥಿಗಳೊಂದಿಗಿನ ಸಂವಾzದÀಲ್ಲಿ ಈ ರೀತಿ ಉಪದೇಶಿಸಿದರು. ಸ್ಥಳೀಯ ಲಯನ್ಸ್ ಕ್ಲಬ್ ಮತ್ತು ಶಾಲೆಯ ಕಸ್ತೂರಬಾ ಇಕೋಕ್ಲಬ್ ಆಶ್ರಯದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಖಿನ್ನತೆ ಮತ್ತು ಒತ್ತಡ ನಿವಾರಣೆಗೆ ಮನಸ್ಸಿನ ಹದಗೊಳಿಸಿ ಮೃದುಗೊಳಿಸುವ ಸುಲಭೋಪಾಯಗಳ ಕುರಿತು ಕೆಲವು ಟಿಪ್ಸ್ ತೆರೆದಿಟ್ಟರು.
ಲಯನ್ ಡಾ.ಜಿ.ಜಿ.ಹೆಗಡೆ ಪ್ರಾಸ್ತಾವಿಕ ಮಾತನಾಡಿ ವಿದ್ಯಾರ್ಥಿ ಸಮುದಾಯದಲ್ಲಿನ ಚಿತ್ತಚಾಂಚಲ್ಯಗಳನ್ನು ಸಮಸ್ಯೆಗಾಗಿಸಿಕೊಳ್ಳದೇ ಸಹಜವೆಂಬಂತೆ ಸ್ವೀಕರಿಸಿ ಒಳಿತನ್ನು ಗ್ರಹಿಸುವ ಪರಿಣಿತಿ ಬರಬೇಕೆಂದು ಅಭಿಪ್ರಾಯಿಸಿದರು. ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಪ್ರಕಾಶ ಪಂಡಿತ, ಲಯನ್ಸ್ ಸಂಸ್ಥೆಯ ಪ್ರಿ.ವಿ.ಡಿ.ಕೆರೂರ, ವಿಷ್ಣು ಪಟಗಾರ, ಬೀರಣ್ಣ ನಾಯಕ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಹಿರಿಯ ಅಧ್ಯಾಪಕ ವಿಷ್ಣು ಭಟ್ಟ ಸ್ವಾಗತಿಸಿದರು. ಕಸ್ತೂರಬಾ ಇಕೋ ಕ್ಲಬ್ ಸಂಚಾಲಕ ಕಿರಣ ಪ್ರಭು ನಿರ್ವಹಿಸಿದರು.