ಕುಮಟಾ: ಶಿರಸಿ ತಾಲೂಕಿನ ಮತ್ತಿಗಟ್ಟ ಅರಣ್ಯ ಪ್ರದೇಶದಲ್ಲಿ ಗೋವುಗಳನ್ನು ಕೊಂದುಹಾಕಿದ ಹುಲಿಗೆ ಸ್ಥಳೀಯರಿಂದ ಅಪಾಯ ಒದಗುವ ಸಾಧ್ಯತೆ ಇದ್ದು ಅದನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಲು ಅರಣ್ಯ ಇಲಾಖೆ ಮುಂದಾಗಬೇಕು ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಅವರು ಆಗ್ರಹಿಸಿದ್ದಾರೆ.
ಹುಲಿ ಗೋವನ್ನು ಕೊಂದು ತಿನ್ನುವುದು ಸಹಜ ಜೈವಿಕಕ್ರಿಯೆ. ಕನ್ನಡ ಸಾಹಿತ್ಯದ ಮೂಲ ತಂತು ಎಂದೇ ಹೇಳಲಾಗುವ ಗೋವಿನ ಹಾಡಿನಲ್ಲೂ ಗೋವನ್ನು ತಿನ್ನಲು ಹುಲಿ ಬರುವ ಕಥನ ಇದೆ. ಅದು ಹುಲಿಯ ಜೀವನ ವಿಧಾನ. ಆದರೆ ಪ್ರೀತಿಯಿಂದ ಸಾಕಿದ ದನಕರುಗಳನ್ನು ಹುಲಿ ಕೊಂದು ತಿಂದಾಗ ಸಹಜವಾಗಿ ಜನರು ಆಕ್ರೋಶಗೊಳ್ಳುತ್ತಾರೆ. ಇದೇ ಸಂದರ್ಭವನ್ನು ನೆಪವಾಗಿಸಿಕೊಂಡು ಬೇಟೆಗಾರರು ಹುಲಿಯನ್ನು ಕೊಲ್ಲವ ಸಾಧ್ಯತೆ ಇದೆ. ಇದನ್ನು ಅರಣ್ಯ ಇಲಾಖೆ ಅಧಿಕಾರಿಗಳು ತಪ್ಪಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ರಾಜ್ಯದ ಹಲವೆಡೆ ಜಾನುವಾರುಗಳ ಮೇಲೆ ದಾಳಿ ಮಾಡಿದ ಹಲಿಯನ್ನು ಹತ್ಯೆ ಮಾಡಿರುವ ಪ್ರಕರಣಗಳು ಜರುಗಿವೆ. ಹುಲಿಯನ್ನು ಕೊಂದ ವರದಿ ಪತ್ರಿಕೆಗಳಲ್ಲಿ ಬಂದ ಮೇಲೆ ಏನೂ ಮಾಡಲಾಗುವುದಿಲ್ಲ. ಇಂದು ಒಂದು ಹುಲಿಯನ್ನು ಕಾಪಾಡಿಕೊಳ್ಳುವುದು ಸವಾಲಿನ ಸಂಗತಿ. ಆದ್ದರಿಂದ ಶಿರಸಿ ಘಟನೆಯಲ್ಲಿ ಗೋವುಗಳನ್ನು ಕೊಂದು ಆಹಾರವಾಗಿಸಿಕೊಂಡ ಹುಲಿಯನ್ನು ಹಿಡಿದು ಸೂಕ್ತ ಸಂರಕ್ಷಣಾ ಸ್ಥಳಕ್ಕೆ ಒಯ್ಯಬೇಕು. ಅರಣ್ಯಾಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಅರಣ್ಯ ಇಲಾಖೆಯ ವೈಫಲ್ಯಗಳ ಬಗ್ಗೆ ಜನಾಭಿಪ್ರಾಯ ಮೂಡಿಸುವ ಕೆಲಸ ಮಾಡಬೇಕಾಗುತ್ತದೆ ಎಂದು ಅರವಿಂದ ಕರ್ಕಿಕೋಡಿ ತಿಳಿಸಿದ್ದಾರೆ.