ಕುಮಟಾ : ಪಂ.ಷಡಕ್ಷರಿ ಗವಾಯಿ ಪುಣ್ಯಸ್ಮರಣೆ ಕಾರ್ಯಕ್ರಮವು ಕೂಜಳ್ಳಿ ಕುಳಿಹಕ್ಕಲ ಶ್ರೀ ಶಾಂತಿಕಾ ಪರಮೇಶ್ವರಿ ಸಭಾಭವನದಲ್ಲಿ ಭಾನುವಾರ ಜರುಗಿತು. ಈ ಸಂದರ್ಭದಲ್ಲಿ ಷಡಕ್ಷರಿ ಪ್ರಶಸ್ಥಿ ಪುರಸ್ಕಾರವನ್ನು ಶ್ರೇಷ್ಠ ಸಂಗೀತ ಸಾಧಕ ಮುಂಬಯಿಯ ಪಂ.ದಿನಕರ ಪನ್ಸಿಕರ್ ಅವರಿಗೆ ಪ್ರದಾನ ಮಾಡಿ ಗೌರವಿಸಲಾಯಿತು.
ಸನ್ಮಾನವನ್ನು ಸ್ವೀಕರಿಸಿದ ಪನ್ಸೀಕರ್ ಮಾತನಾಡಿ, ಸಂಗೀತಾಭ್ಯಾಸಕ್ಕೆ ತಾಳ್ಮೇ ಹಾಗೂ ಏಕಾಗ್ರತೆ ಅತ್ಯಾವಶ್ಯಕವಾಗಿದೆ. ನಿರಂತರ ಸಾಧನೆಯಿಂದಾಗಿ ಮಾತ್ರ ಒಬ್ಬ ಶ್ರೇಷ್ಠ ಸಂಗೀತಗಾರನಾಗಿ ಬೆಳೆಯಲು ಸಾಧ್ಯವಾಗುತ್ತದೆ. ಜಿಲ್ಲೆಯಾದ್ಯಂತ ಸ್ವರ ಸಿಂಚನ ಮಾಡಿದ ಪುಣ್ಯಪುರುಷರ ಹೆಸರಿನಲ್ಲಿ ಸಂಗೀತ ಕಾರ್ಯಕ್ರಮ ನಡೆಸುತ್ತಿರುವದು ಶ್ಲಾಘನೀಯವಾಗಿದೆ. ಇಂತಹ ಉತ್ತಮರನ್ನು ಸ್ಮರಿಸುವಿದು ಆನಂದವನ್ನು ನೀಡುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ಕೊಲ್ಲೂರಿನ ಪ್ರದಾನ ಅರ್ಚಕ ಗೋವಿಂದ ಅಡಿ ಮಾತನಾಡಿ, ಉತ್ತಮ ಗಾಯಕನಾಗಬೇಕಾದರೆ ಅವಿರತ ಸಾಧನೆ ಮಾಡಬೇಕಾಗುತ್ತದೆ. ಸಂಗೀತ ಬ್ರಹ್ಮಾನಂದವನ್ನು ನೀಡುವ ಒಂದು ಮಾರ್ಗವಾಗಿದೆ. ಸಂಗೀತ ಎನ್ನುವುದು ಒಂದು ಸಾಗರ ಇದ್ದಂತೆ ಎಂದರು. ಮುಖ್ಯ ಅತಿಥಿಯಾಗಿ ಸಂಗೀತ ಮತ್ತು ನೈತ್ಯ ಅಕಾಡೆಮಿ ಸದಸ್ಯ ಪ್ರೊ.ಅಶೋಕ ಹುಗ್ಗಣ್ಣವರ್ ಮಾತನಾಡಿ, ಜನಸಾಮಾನ್ಯರಿಗೂ ಸಂಗೀತ ದೊರಕುವಂತೆ ಮಾಡಿದ ಮಹಾನ್ ವಯಕ್ತಿಗಳು ಗವಾಯಿಗಳು. ಇವರ ಪುಣ್ಯ ಸ್ಮರಣೆ ನೆರವೇರಿಸುತ್ತಿರುವುದು ಶ್ಲಾಘನೀಯವಾಗಿದೆ ಎಂದರು. ಅತಿಥಿಯಾಗಿ ಬೆಂಗಳೂರಿನ ಬಿಎನ್‍ಬಿ ನಿರ್ದೇಶಕ ಆನಂದ ವಿ.ಭಟ್ಟ ಮಾತನಾಡಿ, ಪಾಶ್ಚಿಮಾತ್ಯ ಸಂಗೀತದ ಒಲವಿನಿಂದಾಗಿ ಶಾಸ್ತ್ರೀಯ ಸಂಗೀತಕ್ಕೆ ಪ್ರೋತ್ಸಾವ ಕ್ಷೀಣಿಸುವಂತಾಗಿದೆ. ಸಂಗೀತ ಏಕಾಗ್ರತೆ ಹೆಚ್ಚಿಸಲು ಸಹಕಾರಿಯಾಗುತ್ತದೆ. ಆದ ಕಾರಣ ಮಕ್ಕಳಿಗೆ ಸಂಗೀತ ಅಭ್ಯಾಸ ಮಾಡಿಸಬೇಕು. ನಿರಂತರ ಪ್ರಯತ್ನ ಹಾಗೂ ತಾಲೀಮಿನಿಂದ ಮಾತ್ರ ಸಂಗೀತದಲ್ಲಿ ಪ್ರಸಿದ್ಧಿ ಹೊಂದಲು ಸಾಧ್ಯ ಎಂದರು.
ಅತಿಥಿಯಾಗಿ ಉದ್ಯಮಿ ಸುಬ್ರಹಣ್ಯ ಹೆಗಡೆ, ಹೊನ್ನಾವರದ ಜಿ.ಜಿ.ಶಂಕರ ಹಾಘೂ ಸಿದ್ದಾಪುರ ಹವ್ಯಕ ಮಂಡಲ ಮತೃ ವಿಭಾಗದ ವೀಣಾ ಪ್ರಭಾಕರ ಭಟ್ಟ ಮಾತನಾಡಿದರು. ಪ್ರಾರಂಭದಲ್ಲಿ ವೇ.ಮೂ. ವಿಶ್ವೇಶ್ವರ ಭಟ್ಟ ಹಾಗೂ ಸ್ವರ ಸಂಗಮ ಅಧ್ಯಕ್ಷ ಸುಬ್ರಾಯ ಭಟ್ಟ ಕಾರ್ಯಕ್ರಮ ಉದ್ಘಾಟಿಸಿದರು .ಷಡಕ್ಷರಿ ಗವಾಯಿ ಅಕಾಡೆಮಿ ಅಧ್ಯಕ್ಷ ವಸಂತ ರಾವ್ ಅಧ್ಯಕ್ಷತೆ ವಹಿಸಿದ್ದರು. ಗವಾಯಿ ಅಕಾಡೆಮಿಯ ಈಶ್ವರ ಶಾಸ್ತ್ರೀ ಸ್ವಾಗತಿಸಿದರು. ಪತ್ರಕರ್ತ ರಘುಪತಿ ಯಾಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜು ಲಮಾಣಿ ವಂದಿಸಿದರು. ಟಿ.ಎನ್.ಭಟ್ಟ ಹಾಗೂ ಅನಸೂಯಾ ಜಗದೀಶ ನಿರೂಪಿಸಿದರು.
ಸಂಗೀತ : ಬೆಳಿಗ್ಗೆ 9.0 ರಿಂದ ಸಂಜೆ 9.0 ತನಕ ಸಂಗೀತ ಆರಾಧನೆ ನಡೆಸಲಾಯಿತು. ಆರಂಭದಲ್ಲಿ ಪಂ.ಪರಮೇಶ್ವರ ಹೆಗಡೆ ಕಲ್ಬಾಗ ಇವರ ಗಾಯನಕ್ಕೆ ಪ್ರೊ.ಗೋಪಾಲಕೃಷ್ಣ ಹೆಗಡೆ ತಬಲಾ ಮತ್ತು ಪ್ರಕಾಶ ಹೆಗಡೆ ಯಡಳ್ಳಿ ಹಾಮೋನಿಯಂ ಸಾಥ್ ನೀಡಿದರು. ಬಳಿಕ ಮುಂಬಯಿಯ ಪಂ.ನಿತ್ಯಾನಂದ ಹಳದೀಪುರ್ ಬಾನ್ಸುರಿ ವಾದನಕ್ಕೆ ಲಕ್ಷ್ಮೀಶ್ ರಾವ್ ಕಲ್ಗುಂಡಿಕೊಪ್ಪ ತಬಲಾ ಸಾಥ್ ನೀಡಿದರು. ಬೆಂಗಳೂರಿನ ಪ್ರತಿಮಾ ಅತ್ರೇಯ ಹಾಗೂ ಬೆಂಗಳೂರಿನ ಶಶಿಕಲಾ ಭಟ್ಟ ಗಾಯನ, ಗೌರೀಶ ಯಾಜಿ ತಬಲಾ ಸೋಲೋ, ಪಂ ದಿನಕರ ಪನ್ಸೀಕರ್ ಗಾಯನಗಳು ಮನತಣಿಸಿತು. ಕೂಜಳ್ಳಿ ಷಡಕ್ಷರಿ ಗವಾಯಿ ಅಕಾಡೆ ವತಿಯಿಂದ, ಸ್ವರ ಸಂಗಮ ಹಾಗೂ ಗಂಧರ್ವ ಕಲಾಕೇಂದ್ರದ ಸಹಕಾರದೊಂದಿಗೆ ಕಾರ್ಯಕ್ರಮ ಸಂಘಟಿಸಲಾಗಿತ್ತು.