ಬೆಳಗಾವಿ:ಅತಿಥಿ ಉಪನ್ಯಾಸಕರಿಗೆ ನೀಡುವ ಮಾಸಿಕ ಗೌರವಧನ ಹೆಚ್ಚಿಸುವ ಪ್ರಸ್ತಾವನೆ ಸರ್ಕಾರದ ಪರಿಶೀಲನೆಯಲ್ಲಿದೆ. ಈ ಸಂಬಂಧ ಅನುದಾನದ ಲಭ್ಯತೆ ಬಗ್ಗೆ ಆರ್ಥಿಕ ಇಲಾಖೆಯೊಂದಿಗೆ ಸಮಾಲೋಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಭರವಸೆ ನೀಡಿದರು ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ ಒಟ್ಟು 12,674 ಅತಿಥಿ ಉಪನ್ಯಾಸಕರು ಕಾರ್ಯ ನಿರ್ವಹಿಸುತ್ತಿದ್ದು, ಇವರಿಗೆ ನಿಯಮಗಳ ಪ್ರಕಾರ ಸೇವಾ ಭದ್ರತೆ ಒದಗಿಸಲು ಅವಕಾಶವಿಲ್ಲ. ಆದಾಗ್ಯೂ ನೇಮಕಾತಿ ವೇಳೆ ಅತಿಥಿ ಉಪನ್ಯಾಸಕರಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರಿಗೆ 25 ಸಾವಿರ ರು. ಗೌರವ ವೇತನ ನೀಡಲಾಗುತ್ತಿದೆ. ಇದೇ ರೀತಿ ಎಲ್ಲ ಕಡೆ ಹೆಚ್ಚಿಸುವ ಬಗ್ಗೆ ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಮಾಡುವ ಬಗ್ಗೆ ಪರಿಶೀಲಿಸಲಾಗುವುದು ಎಂದರು ಎನ್ನಲಾಗಿದೆ.
ಜಂಟಿ ನಿರ್ದೇಶಕರು ಇಲ್ಲದ ಕಾರಣ ಅತಿಥಿ ಉಪನ್ಯಾಸಕರಿಗೆ ಸರಿಯಾದ ಸಮಯಕ್ಕೆ ಗೌರವ ಧನ ಪಾವತಿಸಲಾಗಲಿಲ್ಲ. ರಾಜ್ಯದ 412 ಸರ್ಕಾರಿ ಕಾಲೇಜುಗಳ ಪೈಕಿ 30 ಕಾಲೇಜುಗಳ ಉಪನ್ಯಾಸಕರಿಗೆ ಮಾತ್ರ ಗೌರವ ಧನವನ್ನು ಬೇರೆ ಬೇರೆ ಕಾರಣಗಳಿಂದ ನೀಡಲಾಗಿಲ್ಲ. 80 ಕೋಟಿ ರು. ಪೈಕಿ 60 ಕೋಟಿ ರು. ಬಿಡುಗಡೆ ಮಾಡಲಾಗಿದ್ದು, 20 ಕೋಟಿ ರು.ಗಳನ್ನು ಜನವರಿ ಅಂತ್ಯದೊಳಗೆ ಬಿಡುಗಡೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು ಎಂದು ವರದಿಯಾಗಿದೆ.
.