ನವದೆಹಲಿ: ಇಂದು ರಫೇಲ್ ಯುದ್ಧ ವಿಮಾನ ಖರೀದಿಯನ್ನು ನ್ಯಾಯಾಲಯದ ಉಸ್ತುವಾರಿಯಲ್ಲಿ ಎಸ್ಐಟಿ ತನಿಖೆಗೆ ಒಳಪಡಿಸಬೇಕು ಎಂದು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ ಎಂದು ವರದಿಯಾಗಿದೆ.
ಬಹುಕೋಟಿ ರಫೇಲ್ ಯುದ್ಧ ವಿಮಾನ ಖರೀದಿ ಹಗರಣದ ಸಂಬಂಧ ತನಿಖೆಗೆ ಆದೇಶ ನೀಡಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇದರಿಂದಾಗಿ ಪ್ರಧಾನಿ ಮೋದಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ಕಾಂಗ್ರೆಸ್ಸಿಗೆ ಭಾರೀ ಮುಖಭಂಗವಾಗಿದೆ ಎನ್ನಲಾಗಿದೆ.
ರಫೇಲ್ ಖರೀದಿ ವ್ಯವಹಾರಗಳನ್ನು ನಿಯಮದಡಿಯಲ್ಲಿಯೇ ಮಾಡಲಾಗಿದೆ. ಯುದ್ಧ ವಿಮಾನ ಖರೀದಿಯಲ್ಲಿ ಯಾವುದೇ ರೀತಿಯ ಅವ್ಯವಹಾರ ಕಂಡುಬಂದಿಲ್ಲ. ಈ ಕಾರಣಕ್ಕೆ ತನಿಖೆ ನಡೆಸಲು ಆದೇಶ ನೀಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶದಲ್ಲಿ ತಿಳಿಸಿದೆ. ನವೆಂಬರ್ 14 ರಂದು ವಿಚಾರಣೆ ಅಂತ್ಯಗೊಳಿಸಿದ್ದ ಸುಪ್ರೀಂಕೋರ್ಟ್ ಇಂದು ಈ ಅರ್ಜಿಯನ್ನು ವಜಾಗೊಳಿಸಿದೆ.
ಇಂದು ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಕೇಂದ್ರ ಸರ್ಕಾರಕ್ಕೆ ರಿಲೀಫ್ ನೀಡಿದೆ. ಒಂದು ವೇಳೆ ಸರ್ವೋಚ್ಛ ನ್ಯಾಯಾಲಯ ತನಿಖೆಗೆ ಆದೇಶಿಸಿದ್ದರೆ ಮೋದಿ ಸರ್ಕಾರಕ್ಕೆ ಇದು ತೀವ್ರ ಹಿನ್ನಡೆಯಾಗುತ್ತಿತ್ತು. ಅಲ್ಲದೇ ಪ್ರಧಾನಿ ಸ್ಥಾನದಲ್ಲಿರುವ ಮೋದಿ ವರ್ಚಸ್ಸಿಗೆ ದೊಡ್ಡ ಹೊಡೆತ ನೀಡುತ್ತಿತ್ತು. ಇತ್ತ ವಿಪಕ್ಷಗಳು ಕೂಡಾ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ವಿಪಕ್ಷಗಳು ಈ ಪ್ರಕರಣವನ್ನೇ ಅಸ್ತ್ರವಾಗಿ ಬಳಸಿಕೊಳ್ಳಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದರು. ಆದರೀಗ ಸುಪ್ರೀಂ ತೀರ್ಪಿನಿಂದ ವಿಪಕ್ಷಗಳಿಗೆ ತೀವ್ರ ಹಿನ್ನಡೆಯಾಗಿದೆ ಎಂದು ತಿಳಿದುಬಂದಿದೆ.