ಶ್ರೀನಗರ: ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಸೇನೆ ಮತ್ತು ಉಗ್ರರ ನಡುವಿನ ಗುಂಡಿನ ಚಕಮಕಿಯಲ್ಲಿ ಮೂವರು ಉಗ್ರರು ಹತರಾಗಿದ್ದಾರೆ ಎಂದು ತಿಳಿದುಬಂದಿದೆ.
ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಸಿರ್ನೂ ಗ್ರಾಮದಲ್ಲಿ ಉಗ್ರರು ಅಡಗಿರುವ ಕುರಿತು ಖಚಿತ ಮಾಹಿತಿ ಪಡೆದ ಸೇನಾಧಿಕಾರಿಗಳು ತುರ್ತು ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಮೂವರು ಉಗ್ರರನ್ನು ಸೈನಿಕರು ಹತ್ಯೆಗೈದಿದ್ದಾರೆ ಎನ್ನಲಾಗಿದೆ.
ಸೇನೆ ತಮ್ಮನ್ನು ಸುತ್ತುವರೆಯುತ್ತಿದ್ದಂತೆಯೇ ಭಯಭೀತ ಗೊಂಡ ಉಗ್ರರು ಏಕಾಏಕಿ ಸೈನಿಕರತ್ತ ಗುಂಡಿನ ದಾಳಿ ನಡೆಸಿದ್ದು, ಈ ವೇಳೆ ಸೈನಿಕರು ನಡೆಸಿದ ಪ್ರತಿದಾಳಿಯಲ್ಲಿ ಉಗ್ರರು ಹತರಾಗಿದ್ದಾರೆ. ಘಟನಾ ಪ್ರದೇಶದಲ್ಲಿ ಮತ್ತಷ್ಟು ಉಗ್ರರು ಅಡಗಿರುವ ಶಂಕೆ ವ್ಯಕ್ತವಾಗಿದ್ದು, ಕಾರ್ಯಾಚರಣೆ ಮುಂದುವರಿದಿದೆ ಎಂದು ವರದಿಯಾಗಿದೆ.