ಕುಮಟಾ: ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ಕಡ್ಡಾಯವಾಗಿರಬೇಕು ಅಲ್ಲದೇ ಒಂದನೇ ತರಗತಿಯಿಂದಲೇ ಇಂಗ್ಲೀಷ್ ಕಲಿಕೆಯನ್ನು ಆರಂಭಿಸಿದರೆ ಮಾತ್ರ ಇಂಗ್ಲೀಷ್ ಬಗೆಗಿನ ಕೀಳರಿಮೆ ಮತ್ತು ಕಲಿಕಾ ನ್ಯೂನತೆ ದೂರವಾಗಿಸುವುದರ ಜೊತೆಗೆ ಮಾತೃಭಾಷೆಯಲ್ಲಿ ಶಿಕ್ಷಣ ದಕ್ಕಿಸಿಕೊಂಡಂತಾಗುತ್ತದೆ ಎಂದು ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಎನ್.ಆರ್.ಗಜು ಅಭಿಪ್ರಾಯಪಟ್ಟರು. ಅವರು ತಮ್ಮ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಅಡಿಯಲ್ಲಿ ಏರ್ಪಡಿಸಿದ ತಾಲೂಕಾ ಮಟ್ಟದ ಇಂಗ್ಲೀಷ್ ಬೋಧಿಸುವ ಶಿಕ್ಷಕರ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ವರ್ಷ ನಡೆದ ಮೂರನೆಯ ಕಾರ್ಯಾಗಾರ ಇದಾಗಿದ್ದು, ಇಲ್ಲಿ ವ್ಯಾಕರಣ ವಿನ್ಯಾಸದ ಬಗ್ಗೆ ವಿಸ್ತ್ರತ ಚರ್ಚೆ, ಉಪನ್ಯಾಸಗಳು ನಡೆದವು.
ತಾಲೂಕಾ ಇಂಗ್ಲೀಷ್ ಭಾಷಾ ಶಿಕ್ಷಕರ ಸಂಘದ ಅಧ್ಯಕ್ಷ, ಸಂಪನ್ಮೂಲ ತಜ್ಞ ಗಂಗಾಧರ ಭಟ್ಟ ನೇತೃತ್ವವಹಿಸಿದದರು. ಈ ಸಂದರ್ಭದಲ್ಲಿ ಆಯ್ದ ಇಪ್ಪತ್ತು ಪ್ರತಿಭಾವಂತ ಮಕ್ಕಳನ್ನು ಸಂಪನ್ಮೂಲ ವ್ಯಕ್ತಿಗಳಂತೆ ಪರಿಣತಗೊಳಿಸಿ ತನ್ಮೂಲಕ ಅವರಿಂದ ಇತರ ಎಲ್ಲ ವಿದ್ಯಾರ್ಥಿಗಳನ್ನು ಕಲಿಕೆಗೆ ಅಣಿಗೊಳಿಸುವ ವಿನೂತನ ಪ್ರಯೋಗಕ್ಕೆ ಕಾರ್ಯಾಗಾರ ಮುನ್ನುಡಿ ಬರೆಯಿತು. ತಮ್ಮದೇ ಸಹಪಾಠಿಗಳಿಂದ ಬಹುಬೇಗ ಕ್ಲಿಷ್ಟಾಂಶಗಳನ್ನು ಗ್ರಹಿಸುವ ಸಾಮಥ್ರ್ಯ ಹೊಂದುವುದನ್ನು ಮನಗೊಳ್ಳಲಾಯಿತು.
ಕೇವಲ ಕಾಟಾಚಾರದ ಕಾರ್ಯಾಗಾರವಾಗದೇ ಕಲಿಕೆಗೆ ಹೊಸ ಪ್ರಯೋಗ ನಿರ್ಮಾಣಗೊಳಿಸಲಾಗಿತ್ತು. ಇಂಗ್ಲೀಷ್ ಶಿಕ್ಷಕರನ್ನು ತಲೆತಲಾಂತರದಿಂದ ವಿಶೇಷ ಗೌರವದಿಂದ ನಮ್ಮ ಸಮಾಜ ನೊಡುತ್ತಾ ಬಂದಿದ್ದು, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ಪಸರಿಸಲು ಇಂಗ್ಲೀಷ ಜ್ಞಾನ ಅವಶ್ಯವೆಂದು ಮಾಧ್ಯಮಿಕ ಶಾಲಾ ನೌಕರರ ಸಂಘದ ತಾಲೂಕಾಧ್ಯಕ್ಷ ಅನಿಲ್ ರೊಡ್ರಿಗಸ್ ಅಭಿಪ್ರಾಯಪಟ್ಟರು. ಪ್ರಾರಂಭದಲ್ಲಿ ಇಂಗ್ಲೀಷ್ ಕ್ಲಬ್‍ನ ಸಂಚಾಲಕ ವಿಷ್ಣು ಭಟ್ಟ ಸ್ವಾಗತಿಸಿದರು. ಕುಮಾರಿ ಪ್ರಜ್ಞಾ ಭಟ್ಟ ಪ್ರಾರ್ಥಿಸಿದರು. ಸಂಘದ ಕಾರ್ಯದರ್ಶಿ ಹೇಮಾ ಭಂಡಾರಿ ನಿರೂಪಿಸಿದರೆ, ಶಿಕ್ಷಕಿ ಮಾಯಾ ನಾಯ್ಕ ವಂದಿಸಿದರು.