ರೈತರ ಸಾಲಮನ್ನಾ ಯೋಜನೆಯಿಂದ ರೈತರ ಬದುಕು ಹಸನಾಗಿದೆಯೇ ಎಂದು ಆ.ರ್.ಬಿ.ಐ ನ ಮಾಜಿ ಗವರ್ನರ್ ರಘುರಾಮ್ ರಾಜನ್ ಪ್ರಶ್ನಿಸಿದ್ದಾರೆ. ರೈತರ ಸಾಲ ಮನ್ನಾ ರಾಷ್ಟ್ರದ ಆರ್ಥಿಕತೆಗೆ ಒಳ್ಳೆಯದಲ್ಲ. ಇದು ದೇಶದಲ್ಲಿನ ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎಂದು ರಘುರಾಮ್ ರಾಜನ್ ಒತ್ತಿ ಹೇಳಿದ್ದಾರೆ.
ಚುನಾವಣೆಗಳನ್ನು ಗೆಲ್ಲುವುದಕ್ಕಾಗಿ ರಾಜಕೀಯ ಪಕ್ಷಗಳು ಸಾಲ ಮನ್ನಾ ಮಾಡುತ್ತಿರುವುದರಿಂದ ರಾಷ್ಟ್ರದ ಆರ್ಥಿಕತೆ ಮೇಲೆ ಪರಿಣಾಮ ಬೀರುತ್ತಿದ್ದು, ಸಾಲ ಮನ್ನಾ ಚುನಾವಣೆ ಭರವಸೆಗಳ ಪ್ರಣಾಳಿಕೆಯಿಂದ ತೆಗೆದು ಹಾಕಬೇಕು ಎಂದು ಚುನಾವಣೆ ಆಯೋಗಕ್ಕೆ ಪತ್ರ ರಾಜನ್ ಬರೆದಿದ್ದಾರೆ ಎಂದು ವರದಿಯಾಗಿದೆ.
ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿರುವುದಕ್ಕೆ ರೈತರ ಸಾಲ ಮನ್ನಾ ಭರವಸೆ ಪ್ರಮುಖ ಕಾರಣ ಎನ್ನಲಾಗಿದೆ. ಛತ್ತೀಸ್‌ಗಢ ರಾಜ್ಯದಲ್ಲಿ ಸಾಲ ಮನ್ನಾ ಭರವಸೆಯಿಂದಲೇ ಕಾಂಗ್ರೆಸ್ ಪ್ರಾಬಲ್ಯ ಸಾಧಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಅಲ್ಲದೆ ಪಂಚ ರಾಜ್ಯಗಳ ಸೋಲಿನ ನಂತರ ಕೇಂದ್ರ ಸರ್ಕಾರ ಸುಮಾರು ರೂ. 4 ಲಕ್ಷ ಕೋಟಿ ಸಾಲಮನ್ನಾ ಮಾಡುವ ಬಗ್ಗೆ ಚಿಂತನೆ ನಡೆಸಿದೆ ಎನ್ನಲಾಗಿದೆ.