ಬೆಂಗಳೂರು:ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ (ಎಐಬಿಒಸಿ) ಪ್ರತಿಭಟನೆ ಹಾಗೂ ಸಾಲಾಗಿ ಬಂದ ರಜೆಯಿಂದಾಗಿ ದೇಶಾದ್ಯಂತ ಡಿಸೆಂಬರ್ 21ರಿಂದ ಡಿಸೆಂಬರ್ 25ತನಕ ಐದು ದಿನಗಳ ಕಾಲ ಬ್ಯಾಂಕ್ ಗಳು ಕಾರ್ಯನಿರ್ವಹಿಸುವುದಿಲ್ಲ.
ಡಿಸೆಂಬರ್ 21ರಂದು ವೇತನ ಪರಿಷ್ಕರಣೆ ಬೇಡಿಕೆ ಮುಂದಿಟ್ಟುಕೊಂಡು ಎಐಬಿಒಸಿ ಪ್ರತಿಭಟನೆ ಮುಷ್ಕರಕ್ಕೆ ಕರೆ ನೀಡಿದೆ. ನಂತರದ ದಿನ(ಡಿಸೆಂಬರ್ 22) ನಾಲ್ಕನೇ ಶನಿವಾರದ ರಜೆ ಹಾಗೂ ಡಿಸೆಂಬರ್ 23 ಭಾನುವಾರದ ರಜೆ. ಮಂಗಳವಾರ (ಡಿಸೆಂಬರ್ 25) ಕ್ರಿಸ್ ಮಸ್ ಪ್ರಯುಕ್ತ ರಜೆ ಇರುತ್ತದೆ ಎನ್ನಲಾಗುತ್ತಿದೆ.
ವಿಜಯ ಮತ್ತು ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್ ಗಳ ವಿಲೀನ ವಿರೋಧಿಸಿ ಅಖಿಲ ಭಾರತ ಬ್ಯಾಂಕ್ ಸಿಬ್ಬಂದಿ ಒಕ್ಕೂಟ (ಎಐಬಿಇಒ) ಡಿಸೆಂಬರ್ 26ರಂದು ಮುಷ್ಕರ ನಡೆಸಲಿದೆ. ಹೀಗಾಗಿ ಡಿಸೆಂಬರ್ 24 (ಸೋಮವಾರ) ಹೊರತುಪಡಿಸಿದರೆ ಒಟ್ಟಾರೆ ಐದು ದಿನ ಬ್ಯಾಂಕಿಂಗ್ ಸೇವೆಗಳು ಲಭ್ಯವಿರುವುದಿಲ್ಲ. ಸಾಲು ರಜೆ ಇರುವುದರಿಂದ ಕೆಲವು ಸಿಬ್ಬಂದಿ ಡಿಸೆಂಬರ್ 24ರಂದು ಕೂಡಾ ರಜೆ ಪಡೆಯುವ ಸಾಧ್ಯಗಳಿದ್ದು, ಬ್ಯಾಂಕ್ ವಹಿವಾಟು ನಡೆಯುವ ಸಾಧ್ಯತೆ ವಿರಳ ಎನ್ನಲಾಗುತ್ತಿದೆ.