ಬೆಂಗಳೂರು: ದೇವಸ್ಥಾನಗಳಲ್ಲಿ ಇನ್ನುಮುಂದೆ ಪ್ರಸಾದ ವಿತರಣೆಗೆ ಕಡ್ಡಾಯವಾಗಿ ಅನುಮತಿ ಪಡೆಯಲೇಬೇಕು ಎಂದು ಧಾರ್ಮಿಕ ದತ್ತಿ ಇಲಾಖೆ ಆದೇಶ ಹೊರಡಿಸಿದೆ.
ಚಾಮರಾಜನಗರ ಜಿಲ್ಲೆಯ ಸುಳ್ವಾಡಿ ಗ್ರಾಮದ ಮಾರಮ್ಮ ದೇವಸ್ಥಾನದ ಪ್ರಸಾದ ದುರಂತ ಪ್ರಕರಣ ನಡೆದ ಬಳಿಕ ಎಚ್ಚೆತ್ತಿರುವ ರಾಜ್ಯ ಸರ್ಕಾರ ಪ್ರಸಾದ (ದಾಸೋಹ) ವಿತರಣೆಗೆ ಬ್ರೇಕ್ ಹಾಕಲು ಮುಂದಾಗಿದೆ. ದೇಗುಲಗಳಲ್ಲಿ ದಾಸೋಹಕ್ಕೆ ಕೆಲ ನಿಯಮಗಳನ್ನು ಜಾರಿಗೆ ತಂದಿದೆ ಎಂದು ತಿಳಿದುಬಂದಿದೆ.
ಕಿಚ್ಚುಗುತ್ತಿಯ ಮಾರಮ್ಮ ದೇವಾಲಯದಲ್ಲಿ ವಿಷ ಪ್ರಸಾದ ಸೇವಿಸಿ ನೂರಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದು, 14 ಮಂದಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆ ಈ ಆದೇಶ ಹೊರಡಿಸಿದೆ.
ದೇವಸ್ಥಾನಗಳಲ್ಲಿ ಅನ್ನದಾಸೋಹ, ನೈವೇದ್ಯ, ಪ್ರಸಾದ ವಿತರಣೆಗೆ ಅನುಮತಿ ಪಡೆಯಲೇಬೇಕು, ಇಷ್ಟೇ ಅಲ್ಲದೆ ಸ್ಥಳೀಯ ಅಧಿಕಾರಿಗಳಿಂದ ಅನುಮತಿ ಪಡೆಯಬೇಕಿದೆ., ಅನುಮತಿ ಪಡೆಯದೆ ಅನ್ನದಾಸೋಹ ಮಾಡುವಂತಿಲ್ಲ.
ದಾಸೋಹ ತಯಾರಿಸುವ ಕೋಣೆಯಲ್ಲಿ ಸಿಸಿಟಿವಿಯನ್ನು ಕಡ್ಡಾಯವಾಗಿ ಅಳವಡಿಸಬೇಕು, ದೇವರಿಗೆ ನೈವೇದ್ಯ ನೀಡುವ ಮುನ್ನ ಪರಿಶೀಲನೆ ನಡೆಸಬೇಕು ಎಂದು ಧಾರ್ಮಿಕ ದತ್ತಿ ಇಲಾಖೆ ಆದೇಶದಲ್ಲಿ ತಿಳಿಸಿದೆ ಎಂದು ವರದಿಯಾಗಿದೆ.