ಕಾರವಾರ : ಕಾಳಿ ನದಿಯಲ್ಲಿ ಮುಳುಗಿ ತಂದೆ ಸೇರಿದಂತೆ ಮೂವರು ಮಕ್ಕಳು ಮೃತಪಟ್ಟು, ತಾಯಿ ಅಸ್ವಸ್ಥವಾಗಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯ ಬೊಮ್ನಳ್ಳಿ ಬಳಿ ನಡೆದಿದೆ. ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ನಾಲ್ವರು ಜಲ ಸಮಾಧಿಯಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ಕಾಳಿ ನದಿಯಲ್ಲಿ ಮುಳುಗಿ ತಂದೆ ಧೂಳು ಗಾವಡೆ (48) ಮಕ್ಕಳಾದ ಕೃಷ್ಣಾ ಧೂಳು ಗಾವಡೆ (6), ಗಾಯಿತ್ರಿ ಧೂಳು ಗಾವಡೆ (9) ಹಾಗೂ ಸತೀಶ್ ಬೀರು ಗಾವಡೆ (7) ಮೃತ ದುರ್ದೈವಿಗಳು.
ಇಂದು ಸಂಜೆ ದಂಪತಿ ಸೇರಿದಂತೆ ಮೂವರು ಮಕ್ಕಳು ಅಂಬಿಕಾನಗರ ಸಮೀಪದ ಬೊಮ್ನಳ್ಳಿ ಬಳಿಯ ಕಾಳಿ ನದಿಗೆ ಬಟ್ಟೆ ತೊಳೆಯಲು ತೆರಳಿದ್ದರು. ಈ ವೇಳೆ ನದಿಯಲ್ಲಿ ಆಟವಾಡುತ್ತಿದ್ದ ಗಾಯಿತ್ರಿ ಮೊದಲು ನದಿಯಲ್ಲಿ ಕೊಚ್ಚಿ ಹೋಗಿದ್ದಾಳೆ. ಬಳಿಕ ಇಬ್ಬರೂ ಮಕ್ಕಳು ಆಕೆಯನ್ನೆ ಹಿಂಬಾಲಿಸಲು ಹೋಗಿ ನದಿಯಲ್ಲಿ ಮುಳುಗಿದ್ದಾರೆ. ಮಕ್ಕಳು ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡ ದಂಪತಿ ಏಕಾಏಕಿ ನೀರಿಗೆ ಜಿಗಿದಿದ್ದಾರೆ.
ನದಿಯಲ್ಲಿ ನೀರು ಹೆಚ್ಚಿದ್ದರಿಂದ ಇಬ್ಬರೂ ನೀರು ಪಾಲಾಗಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯ ಮೀನುಗಾರರು ಮಹಿಳೆಯನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಇನ್ನುಳಿದವರು ನೀರಿನಲ್ಲಿ ಕೊಚ್ಚಿ ಹೋಗಿದ್ದರು ಎನ್ನಲಾಗಿದೆ. ಮೃತರೆಲ್ಲರೂ ಒಂದು ಕುಟುಂಬದವರಾಗಿದ್ದು ಸ್ಥಳಕ್ಕೆ ಪೊಲೀಸರು ಆಗಮಿಸಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ವರದಿಯಾಗಿದೆ.