ಬೆಂಗಳೂರು : ಬಂಗಾಳ ಕೊಲ್ಲಿಯಲ್ಲಿ ಪೆಥಾಯ್ ಚಂಡಮಾರುತದ ಅಬ್ಬರದಿಂದ ರಾಜ್ಯದಲ್ಲಿ ಚಳಿಯ ಪ್ರಮಾಣ ಹೆಚ್ಚಾಗಿದೆ. ಮೋಡ ಕವಿದ ವಾತಾವರಣವು ಚಳಿಯ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಿದೆ ಎನ್ನಲಾಗಿದೆ .
ಸಂಜೆ 6 ಗಂಟೆಯಿಂದ ಮರುದಿನ ಬೆಳಗ್ಗೆ ಸುಮಾರು 7 ಗಂಟೆಯವರೆಗೂ ಕೊರೆಯುವ ಚಳಿಯಿದೆ. ಹೀಗಾಗಿ ಮಕ್ಕಳು, ವೃದ್ಧರು, ಅನಾರೋಗ್ಯ ಪೀಡಿತರು ಚಳಿಗೆ ನಡುಗುವಂತಾಗಿದೆ.
ಬೆಂಗಳೂರು ಗ್ರಾಮಾಂತರದಲ್ಲಿ 11.8 ಡಿಗ್ರಿ ತಾಪಮಾನ ದಾಖಲಾಗಿದ್ದು, ಅತಿಕಡಿಮೆ ಎಂದು ಹೇಳಲಾಗುತ್ತಿದೆ. ನಂತರ ಹಾಸನದಲ್ಲಿ 11.9 ಡಿಗ್ರಿಯಿದ್ದರೆ, ಕೊಡಗಿನಲ್ಲಿ 12.4, ಬೆಂಗಳೂರು ನಗರದಲ್ಲಿ 12.8 ಡಿಗ್ರಿ ತಾಪಮಾನ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ ಎಂದು ತಿಳಿದುಬಂದಿದೆ.
ಉಡುಪಿಯಲ್ಲಿ 20.1 ಡಿಗ್ರಿ ತಾಪಮಾನ ದಾಖಲಾಗಿದ್ದು, ಅತಿ ಹೆಚ್ಚು ಎಂದು ಹೇಳಲಾಗುತ್ತಿದೆ. ದಕ್ಷಿಣ ಕನ್ನಡದಲ್ಲಿ 19 ಡಿಗ್ರಿ, ಉತ್ತರ ಕನ್ನಡದಲ್ಲಿ 17.7 ಡಿಗ್ರಿ ತಾಪಮಾನ ದಾಖಲಾಗಿದೆ. ಉಳಿದಂತೆ ಬಾಗಲಕೋಟದಲ್ಲಿ 14.6, ಬಳ್ಳಾರಿಯಲ್ಲಿ 15.9, ಬೆಳಗಾವಿಯಲ್ಲಿ 13.5, ಬೀದರ್ನಲ್ಲಿ 14.5, ಚಿಕ್ಕಬಳ್ಳಾಪುರದಲ್ಲಿ 13.2, ಚಿಕ್ಕಮಗಳೂರಿನಲ್ಲಿ 13.3, ಧಾರವಾಡದಲ್ಲಿ 13.5, ಹಾವೇರಿಯಲ್ಲಿ 14.6, ಕಲ್ಬುರ್ಗಿಯಲ್ಲಿ 14.7 ಡಿಗ್ರಿ ತಾಪಮಾನ ದಾಖಲಾಗಿದೆ.
ದಕ್ಷಿಣ ಒಳನಾಡಿನ ಕೆಲ ಭಾಗಗಳಲ್ಲಿ ಮುಂದಿನ 24 ಗಂಟೆಗಳ ಕಾಲ ಹಿಮದಿಂದ ಕೂಡಿದ ಗಾಳಿಯು ಬೀಸಲಿದೆ. ಕರಾವಳಿ ಕರ್ನಾಟಕ, ಉತ್ತರ ಒಳನಾಡಿನ ಭಾಗಗಳಲ್ಲಿ ಬಿಸಿಯ ವಾತಾವರಣವಿದೆ ಎಂದು ವರದಿಯಾಗಿದೆ.