ಬೆಂಗಳೂರು: ಇಂದು ಬಿಎಂಟಿಸಿ ಬಸ್ ಢಿಕ್ಕಿಯಾಗಿ ಇಬ್ಬರು ವಿದ್ಯಾರ್ಥಿಗಳು ದಾರುಣವಾಗಿ ಸಾವನ್ನಪ್ಪಿದ ದುರ್ಘಟನೆ ಮೈಸೂರು ರಸ್ತೆಯ ಗೋಪಾಲನ್ ಮಾಲ್ ಬಳಿ ನಡೆದಿದೆ ಎಂದು ತಿಳಿದುಬಂದಿದೆ.
ಕಾಲೇಜಿಗೆ ಹೋಗಲು ನಿಂತಿದ್ದಾಗ ಬಸ್ ಢಿಕ್ಕಿಯಾಗಿ ಬೆಳ್ಳಂಬೆಳಗ್ಗೆ ಅವಘಡ ಸಂಭವಿಸಿದ್ದು, ಯದುಕುಮಾರ್ ಎಸ್.ವೈ, ಚಂದ್ರಕಾಂತ್ ಎನ್ನುವ ಇಬ್ಬರು ದಾರುಣವಾಗಿ ಸಾವನ್ನಪ್ಪಿರುವ ಪಿಯುಸಿ ವಿದ್ಯಾರ್ಥಿಗಳು.
ಮೈಸೂರು ರಸ್ತೆಯ ಮೂಲಕ ಮೆಜೆಸ್ಟಿಕ್ ನತ್ತ ಬಸ್ ಹೋಗುತ್ತಿತ್ತು, ಈ ವೇಳೆ ಬ್ರೇಕ್ ಫೇಲ್ಯೂರ್ ಆಗಿ ಬಸ್ ಪಾದಚಾರಿ ಮಾರ್ಗದ ಮೇಲೆ ನುಗ್ಗಿದೆ. ಪಾದಚಾರಿ ಮಾರ್ಗದಲ್ಲಿ ಹೋಗುತ್ತಿದ್ದ ನಾಲ್ವರಿಗೆ ಡಿಕ್ಕಿ ಹೊಡೆದಿದ್ದು, ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎನ್ನಲಾಗಿದೆ.
ಇಬ್ಬರೂ ಕೂಲಿ ಕಾರ್ಮಿಕರ ಮಕ್ಕಳಾಗಿದ್ದು, ಆಸ್ಪತ್ರೆಯಲ್ಲಿ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಮಕ್ಕಳ ನೇತ್ರದಾನ ಮಾಡಲು ಪೋಷಕರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ. ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರವನ್ನು ಬಿಬಿಎಂಪಿ ಘೋಷಿಸಿದೆ.
ಚಾಲನೆ ವೇಳೆ ಹೃದಯಾಘಾತವಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಾಲಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.