ಭಟ್ಕಳ: ನಲವತ್ತೈದು ವರ್ಷಗಳ ಬಳಿಕ ಯಲ್ಲಾಪುರದಲ್ಲಿ ಅದ್ದೂರಿಯಾಗಿ ಆಯೋಜನೆಗೊಂಡಿರುವ ಉತ್ತರ ಕನ್ನಡ 21ನೇ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರಾದ ಷಾಮಿಯಾನದ ಕವಿ ಡಾ.ಸೈಯದ್ ಝಮೀರುಲ್ಲಾ ಷರೀಫ್ ಅವರಿಗೆ ಜಿಲ್ಲಾ ಕಸಾಪ ವತಿಯಿಂದ ಅಧಿಕೃತ ಆಮಂತ್ರಣ ನೀಡಿ ಆಹ್ವಾನಿಸಲಾಯಿತು.
ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಅರವಿಂದ ಕರ್ಕಿಕೋಡಿಯವರು ಜಿಲ್ಲಾ ಕಸಾಪ ಸದಸ್ಯರೊಡಗೂಡಿ ಷರೀಪರ ಮನೆಗೆ ತೆರಳಿ ಗೌರವಪೂರ್ವಕವಾಗಿ ಸಾಲು ಹೊದಿಸಿ ಫಲತಾಂಬೂಲ ನೀಡಿ ಸಮ್ಮೇಳನಕ್ಕೆ ಅಧೀಕೃತವಾಗಿ ಆಹ್ವಾನಿಸಿದರು.
ಸನ್ಮಾನ ಸ್ವೀಕರಿಸಿದ ಮಾತನಾಡಿದ ಷರೀಫ್ ಅವರು ಇಡಿ ಜಿಲ್ಲೆ ಇಂದು ತನಗೆ ಅತ್ಯಂತ ಗೌರವ ಸ್ಥಾನ ನೀಡುತ್ತಿದೆ. ತಾನು ಕನ್ನಡದ ಋಣ ತೀರಿಸಲು ಸಾಧ್ಯವಿಲ್ಲ. ಅಂತಹ ಮಹತ್ವದ ಸ್ಥಾನ ಕನ್ನಡ ತಂದುಕೊಟ್ಟಿದೆ. ಒಂದು ಭಾಷೆಯನ್ನು ತಾಯಿಗೆ ಹೋಲಿಸುವುದರಲ್ಲಿ ಮಹತ್ವದ ಧ್ವನಿಯಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಕಸಾಪ ಗೌರವ ಕೋಶಾಧ್ಯಕ್ಷ ಉಮೇಶ ಮುಂಡಳ್ಳಿ, ಗೌರವ ಕಾರ್ಯದರ್ಶಿ ಗಂಗಾಧರ ಕೊಳಗಿ, ಸಹ ಕಾರ್ಯದರ್ಶಿ ಡಾ.ಸುರೇಶ ನಾಯ್ಕ, ಕುಮಟಾ ತಾಲೂಕು ಕಸಾಪ ಅಧ್ಯಕ್ಷ ಶ್ರೀಧರ ಗೌಡ ಉಪ್ಪಿನಗಣಪತಿ ಭಾಸ್ಕರ ನಾಯ್ಕ ಕುಮಟಾ ಮೊದಲಾದವರು ಇದ್ದರು.