ಜಕಾರ್ತಾ: ಜ್ವಾಲಾಮುಖಿ ಸ್ಫೋಟವು ಸುನಾಮಿಯಾಗಿ ಬದಲಾಗಿದ್ದು,ಇಂಡೋನೇಷ್ಯಾದಲ್ಲಿ ಶನಿವಾರ ಸಂಭವಿಸಿದ ಸುನಾಮಿ ಆರ್ಭಟಕ್ಕೆ ಇಲ್ಲಿಯವರೆಗೆ ಸುಮಾರು 222 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ ಎಂದು ತಿಳಿದುಬಂದಿದೆ.
ಇಂಡೋನೇಷ್ಯಾದಲ್ಲಿ ಸುನಾಮಿ ಅಬ್ಬರಕ್ಕೆ ಜಾವಾ ಹಾಗೂ ಸುಮಾತ್ರಾ ದ್ವೀಪಗಳು ತತ್ತರಿಸಿ ಹೋಗಿದೆ. ಶನಿವಾರದಂದು ಅನಾಖ್ ಕ್ರಾಕಟೋ ಜ್ವಾಲಾಮುಖಿ ಸ್ಫೋಟಗೊಂಡ ಪರಿಣಾಮ ಸಮುದ್ರದಲ್ಲಿ ಬೃಹತ್ ಅಲೆಗಳು ನಿರ್ಮಾಣವಾಗಿ ಸುನಾಮಿ ಸಂಭವಿಸಿತ್ತು ಎನ್ನಲಾಗಿದೆ.
ಈ ಪ್ರಕೃತಿ ಅವಘಡದಿಂದ ಸುಮಾರು 745 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಇಲ್ಲಿಯವರೆಗೆ 222ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಹಲವು ಮಂದಿ ನಾಪತ್ತೆ ಆಗಿದ್ದಾರೆ ಎಂದು ತಿಳಿದುಬಂದಿದೆ.
ಸದ್ಯ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಸುನಾಮಿಯಿಂದ ತತ್ತರಿಸಿರುವ ಇಂಡೋನೇಷ್ಯಾಕ್ಕೆ ನೆರೆಯ ರಾಷ್ಟ್ರಗಳಾದ ಮಲೇಷ್ಯಾ ಹಾಗೂ ಆಸ್ಟ್ರೇಲಿಯಾ ನೆರವು ನೀಡುವುದಾಗಿ ಹೇಳಿದೆ ಎಂದು ವರದಿಯಾಗಿದೆ.