ಇಸ್ಲಾಮಾಬಾದ್: ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್ ಷರೀಫ್ ಅವರಿಗೆ ಅಲ್-ಅಝಿಝಿಯಾ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ, ಭ್ರಷ್ಟಾಚಾರ ನಿಗ್ರಹ ಕೋರ್ಟ್ ಸೋಮವಾರ ಏಳು ವರ್ಷ ಶಿಕ್ಷೆ ವಿಧಿಸಿದೆ ಎಂದು ತಿಳಿದುಬಂದಿದೆ.
ನವಾಜ್ ಷರೀಫ್ ವಿರುದ್ಧದ ಎರಡು ಭ್ರಷ್ಟಾಚಾರ ಪ್ರಕರಣಗಳ ವಿಚಾರಣೆ ನಡೆಸಿದ ಅಕೌಂಟಬೆಲಿಟಿ ಕೋರ್ಟ್ ನ್ಯಾಯಾಧೀಶ ಮಹಮದ್ ಅರ್ಷದ್ ಮಲ್ಲಿಕ್, ಒಂದು ಪ್ರಕರಣದಲ್ಲಿ 68 ವರ್ಷದ ನವಾಜ್ ಷರೀಫ್ ಅವರನ್ನು ಖುಲಾಸೆಗೊಳಿಸಿದ್ದಾರೆ ಎನ್ನಲಾಗಿದೆ.
ಕಳೆದ ವಾರ ನವಾಜ್ ಷರೀಫ್ ವಿರುದ್ಧ ಫ್ಲಾಗ್ಶಿಪ್ ಇನ್ವೆಸ್ಟ್ಮೆಂಟ್ ಮತ್ತು ಅಲ್-ಅಝಿಝಿಯಾ ಪ್ರಕರಣಗಳ ವಿಚಾರಣೆಗಳನ್ನು ಪೂರ್ಣಗೊಳಿಸಿದ್ದ ಕೋರ್ಟ್, ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು. ಇಂದು ತೀರ್ಪು ಪ್ರಕಟಿಸಿದ ನ್ಯಾಯಾಧೀಶ ಮಹಮದ್ ಅರ್ಷದ್ ಮಲ್ಲಿಕ್ ಅವರು, ಪಾಕ್ ಮಾಜಿ ಪ್ರಧಾನಿಗೆ ಒಂದು ಪ್ರಕರಣದಲ್ಲಿ ಏಳು ವರ್ಷ ಶಿಕ್ಷೆ ವಿಧಿಸಿದ್ದಾರೆ ಎಂದು ತಿಳಿದುಬಂದಿದೆ .
ಒಂದು ಪ್ರಕರಣದಲ್ಲಿ ಈಗಾಗಲೇ 11 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ನವಾಜ್ ಅವರು ಈಗ ಮತ್ತೆ ಏಳು ವರ್ಷ ಶಿಕ್ಷೆಗೆ ಗುರಿಯಾಗಿದ್ದಾರೆ ಎಂದು ವರದಿಯಾಗಿದೆ.