ನವದೆಹಲಿ: ಇಂದು ವಿಶ್ವದೆಲ್ಲೆಡೆ ಕ್ರಿಸ್ ಮಸ್ ಸಂಭ್ರಮಾಚರಣೆ ನಡೆಯುತ್ತಿದೆ. ಯೇಸು ಕ್ರಿಸ್ತನ ಹುಟ್ಟುಹಬ್ಬವನ್ನು ಸಡಗರ, ಸಂಭ್ರಮದಿಂದ ಆಚರಿಸಲಾಗುತ್ತಿದೆ.
ಮಧ್ಯರಾತ್ರಿಯಿಂದಲೇ ವಿವಿಧ ಚರ್ಚ್ ಗಳಲ್ಲಿ ಶ್ರದ್ದಾ, ಭಕ್ತಿಯಿಂದ ಕ್ರಿಸ್ ಮಸ್ ಆಚರಿಸಲಾಗುತ್ತಿದ್ದು, ಕೇಕ್ ಕತ್ತರಿಸಿ, ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಯೇಸುಕ್ರಿಸ್ತನ ಸ್ಮರಣೆ ಮಾಡಲಾಗುತ್ತಿದೆ ಎನ್ನಲಾಗಿದೆ.
ದೇಶದಾದ್ಯಂತ ಕ್ರಿಸ್’ಮಸ್ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜನತೆಗೆ ಶುಭಾಶಯಗಳನ್ನು ಕೋರಿದ್ದಾರೆ ಎಂದು ತಿಳಿದುಬಂದಿದೆ.
ಸಾಮಾಜಿಕ ಜಾಲತಾಣ ಟ್ವಿಟರ್’ನಲ್ಲಿ ಟ್ವೀಟ್ ಮಾಡಿರುವ ಅವರು, ಎಲ್ಲರಿಗೂ ಕ್ರಿಸ್ ಮಸ್ ಹಬ್ಬದ ಶುಭಾಶಯಗಳು. ಕ್ರಿಸ್ ಮಸ್ ಹಬ್ಬದ ಹಿನ್ನೆಲೆಯಲ್ಲಿ ನಾವು ಯೇಸು ಕ್ರಿಸ್ತನ ಶ್ರೇಷ್ಠ ಬೋಧನೆಗಳನ್ನು ನೆನೆಯುತ್ತಿದ್ದೇವೆ ಹಾಗೂ ಸಹಾನುಭೂತಿ ಮತ್ತು ಸಮಾನ ಸಮಾಜ ಸೃಷ್ಟಿಯುವ ಅವರ ಶ್ರಮಗಳನ್ನು ಸ್ಮರಿಸುತ್ತಿದ್ದೇವೆಂದು ಹೇಳಿದ್ದಾರೆ ಎಂದು ವರದಿಯಾಗಿದೆ.