ಕುಮಟಾ : ತಾಲೂಕ ಕಲಭಾಗ ಗ್ರಾಮದ ದೇವಗುಂಡಿಯಲ್ಲಿ ದಿನಾಂಕ:28-12-2018 ರಿಂದ 29-12-2018ರವರೆಗೆ ಜಟ್ಟಿ ಮಂಜುನಾಥ ಮಡಿವಾಳ ಇವರ ನೇತೃತ್ವದಲ್ಲಿ ಅರ್ಚಕರಾದ ಸರ್ವೇಶ್ವರ ಭಟ್ಟ ಹಾಗೂ ಊರಿನ ಗ್ರಾಮ ದೇವರ ಅರ್ಚಕರು ಹಾಗೂ ಭಕ್ತರ ಸಹಕಾರದಿಂದ ಜಟಕದೇವರ ಪಕ್ಕ ನಾಗದೇವತೆಯನ್ನು ಪುನಃ ಪ್ರತಿಷ್ಠೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಜಟಕ ಮಹಾಸತಿ ದೇವರಿಗೂ ಕಲಾವೃದ್ಧಿ, ದುರ್ಗಾಹವನ ಮುಂತಾದ ದೇವತಾ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅನ್ನ ಸಂತರ್ಪಣೆಯೂ ಇರುತ್ತದೆ.

ಆಗಮ ಪಂಡಿತರಾದ ದಿ|| ಕಟ್ಟೆ ಪರಮೇಶ್ವರ ಭಟ್ಟ, ನವಿಲಗೋಣ ಇವರ ಪುತ್ರರಾದ ಶಂಕರ ಪರಮೇಶ್ವರ ಭಟ್ಟ ಇವರ ಮುಖಂಡತ್ವದಲ್ಲಿ ಈ ದೇವತಾ ಕಾರ್ಯಕ್ರಮ ನಡೆಯಲಿದೆ. ಜಟಕ ದೇವರ ಅರ್ಚಕರಾದ ಸರ್ವೇಶ್ವರ ಲಕ್ಷ್ಮೀನಾರಾಯಣ ಭಟ್ಟ ಬಗ್ಗೋಣ, ಮಹಾಸತಿ ದೇವಿಯ ಅರ್ಚಕರಾದ ನಾಗೇಶ ಕುಪ್ಪಯ್ಯ ಪಟಗಾರ, ಹನುಮಂತ ರಾಮಕೃಷ್ಣ ಪಟಗಾರ ಹಾಗೂ ಕುಟುಂಬದವರು ಅಲ್ಲದೇ ಪರಿವಾರ ದೇವರಾದ ಬಬ್ರುಲಿಂಗೇಶ್ವರ ದೇವರ ಅರ್ಚಕರಾದ ಕೃಷ್ಣ ಹೊಸಬಯ್ಯ ಪಟಗಾರ, ವೆಂಕಟ್ರಮಣ ಮಾಸ್ತಿ ಪಟಗಾರ, ಭೂತೇಶ್ವರ ದೇವರ ಅರ್ಚಕರಾದ ಗಣಪಯ್ಯ ತಿಮ್ಮಯ್ಯ ಪಟಗಾರ, ನಾರಾಯಣ ನಾಗಯ್ಯ ಪಟಗಾರ ಮತ್ತು ಅವರ ಕುಟುಂಬದವರು, ಊರಿನ ಸಮಸ್ತ ಭಕ್ತರ ಉಪಸ್ಥಿತಿಯಲ್ಲಿ ದೇವತಾ ಕಾರ್ಯಕ್ರಮ ನೆರವೇರಲಿದೆ. ಗ್ರಾಮ ದೇವರಿಗೆ ವಾರ್ಷಿಕವಾಗಿ ಗಡಿಹಬ್ಬ, ಸಂಕ್ರಾಂತಿ ಪೂಜೆ, ನವರಾತ್ರಿ ಪೂಜೆ, ಕಾರ್ತಿಕ ಪೂಜೆಗಳು ನಡೆಯುತ್ತಾ ಇರುತ್ತದೆ.

RELATED ARTICLES  ಹೆಲ್ಪ ಮಾಡ್ತೇನೆ ಎಂದು ಬಂದವನು ಹಣ ಲಪಟಾಯಿಸಿದ

ದೇವಗುಂಡಿ ಊರಲ್ಲಿ ಈಗ 44 ಕುಟುಂಬಗಳಿದ್ದು, 1970ರ ದಶಕದ ಸುಮಾರಿಗೆ 15 ಕುಟುಂಬದವರು ಬೇರೆ ಊರಿಗೆ ವಲಸೆ ಹೋಗಿ ಅಲ್ಲಿಯೇ ವಾಸ್ತವ್ಯ ಮಾಡಿಕೊಂಡು ಬಂದಿರುತ್ತಾರೆ. ಸುಮಾರು 10-15 ಶತಮಾನಗಳ ಹಿಂದೆ ಈ ಊರು ಸಣ್ಣ ನಡುಗಡ್ಡೆಯಂತಾಗಿದ್ದು (ಕುರ್ವೆ) 3 ಎಕರೆ ಚಿರೆಕಲ್ಲಿನಿಂದ ಆವೃತವಾಗಿದ್ದು ಆವಾಗ 4-5 ಕುಟುಂಬದವರು ವಾಸ್ತವ್ಯವಿದ್ದಾರೆಂದು ಹೇಳಲಾಗುತ್ತಿದೆ. ಹರಿಯುತ್ತಿರುವ ಕುಮಟಾ ಹೊಳೆಯನ್ನು ಉತ್ತರ ದಿಕ್ಕಿಗೆ ತಿರುಗಿಸಿ ಪೂರ್ವ ಮತ್ತು ದಕ್ಷಿಣ ದಿಕ್ಕಿನ ಸ್ಥಳವನ್ನು ಸಾಗುವಳಿ ಕ್ಷೇತ್ರವನ್ನಾಗಿ ಪರಿವರ್ತಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಊರಿನ ಪಶ್ಚಿಮಕ್ಕೆ ಕಾಮನಗುಂಡಿ ಹೊಳೆಯಿದ್ದು ಪೂರ್ವಕ್ಕೆ 30 ಗುಂಡಿ ಹೊಳೆ ಇರುತ್ತದೆ. ಊರಿನ 3 ದಿಕ್ಕಿಗೆ ಜಟಕ, ಮಾಸ್ತಿ, ಬಬ್ರು, ಭೂತೇಶ್ವರ ದೇವರನ್ನು ಸ್ಥಾಪಿಸಿ ಊರಿಗೆ ದೇವಗುಂಡಿ ಎಂದು ಹೆಸರಿಸಿದರೆಂದು ಹೇಳಲಾಗುತ್ತದೆ. ಹಿಂದೆ ಜೈನರ ಸ್ಥಳವಾಗಿದ್ದು, ನಂತರ ಗ್ರಾಮಒಕ್ಕಲು, ಆಚಾರಿ, ಮಡಿವಾಳದವರು ವಾಸ್ತವ್ಯವಾಗಿದ್ದು ಗ್ರಾಮ ಒಕ್ಕಲು ಬಹುಸಂಖ್ಯಾತರಾಗಿರುತ್ತಾರೆ.

RELATED ARTICLES  ರಾಮಚಂದ್ರಾಪುರ ಮಠಕ್ಕೆ ಆಡಳಿತಾಧಿಕಾರಿ ನೇಮಕ ವಿಚಾರಣೆಗೆ ತಡೆ.

1984ನೇ ಸಾಲಿನಲ್ಲಿ ದಿ|| ಮಂಜುನಾಥ ಜಟ್ಟಿ ಮಡಿವಾಳ ಇವರು ಜಟಕ, ಮಹಾಸತಿ ದೇವರನ್ನು ಊರಿನವರ ಸಹಕಾರದಿಂದ ಪುನಃ ಪ್ರತಿಷ್ಠಾಪಿಸಿದರು. ಆವಾಗ ಈ ಪ್ರತಿಷ್ಠೆ ಕಾರ್ಯಕ್ರಮಕ್ಕೆ ದಿ|| ಕಟ್ಟೆ ಪರಮೇಶ್ವರ ಭಟ್ಟರು ನೆರವೇರಿಸಿಕೊಟ್ಟಿದ್ದರು. 1995ರಲ್ಲಿ ಪರಿವಾರ ದೇವರಾದ ಶ್ರೀ ಬಬ್ರುಲಿಂಗೇಶ್ವರ ಹಾಗೂ ಭೂತೇಶ್ವರ ದೇವರ ಅರ್ಚಕರು, ಯುವಕ ಮಂಡಳಿಯವರು ಹಾಗೂ ಊರಿನ ಭಕ್ತರ ಸಹಕಾರದಿಂದ ಗುಡಿಯಿಲ್ಲದ ಈ ಎರಡು ದೇವರಿಗೆ ಗುಡಿ ಕಟ್ಟಿ ಪ್ರತಿಷ್ಠಾಪಿಸಿದರು. ದಿನಾಂಕ: 29-12-2018 ರಂದು ಪ್ರತಿಷ್ಠೆಯ ಕಾರ್ಯಕ್ರಮದ ನಂತರ ರಾತ್ರಿ 10:30ಕ್ಕೆ ಮೋಹನ ನಾಯ್ಕ ಕೂಜಳ್ಳಿ ಹಾಗೂ ಸ್ಥಳೀಯ ಕಲಾವಿದರಿಂದ “ಬ್ರಹ್ಮ ಕಪಾಲ”ವೆಂಬ ಯಕ್ಷಗಾನ ಆಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ಎಲ್ಲರೂ ಸಹಕರಿಸಲು ಕೋರಿದ್ದಾರೆ.