ಕುಮಟಾ:ತಾಲೂಕಿನ ಕೊಂಕಣ ಎಜ್ಯುಕೇಶನ್ ಟ್ರಸ್ಟಿನ ರಜತ ಸಂಭ್ರಮ ಕಾರ್ಯಕ್ರಮದ ಸಮಾರೋಪ ಸಮಾರಂಭ ಯಶಸ್ವಿಯಾಗಿ ನಡೆದು ರಜತ ಸಂಭ್ರಮ ಸಂಪನ್ನಗೊಂಡಿತು.
ಸ್ಫ್ಪೂರ್ತಿಯ ಜೊತೆಗೆ ಸಮರ್ಪಣಾ ಭಾವವಿದ್ದರೆ ಆ ಸಂಸ್ಥೆ ಆರೋಗ್ಯಕರದ ಜೊತೆಗೆ ಹೆಮ್ಮರವಾಗಿ ಬೆಳೆಯುತ್ತದೆ ಎಂಬುದಕ್ಕೆ ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಸಾಕ್ಷಿ ಎಂದು ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷ ಬಸ್ತಿ ವಾಮನ ಶೆಣೈ ಹೇಳಿದರು.
ಇಂದಿನ ದಿನದಲ್ಲಿ ಶಿಕ್ಷಣ ಎಂಬುದು ವ್ಯಾಪಾರವಾಗಿಬಿಟ್ಟಿದೆ. ಇಂತಹ ಸ್ಥಿತಿಯಲ್ಲಿ ಈ ಟ್ರಸ್ಟಿನವರ ಒಳ್ಳೆಯ ಮನಸಿನಿಂದಾಗಿ ಈ ಸಂಸ್ಥೆ ಬೃಹದಾಕಾರವಾಗಿ ಬೆಳೆಯುತ್ತಿದೆ. ಈ ಟ್ರಸ್ಟ್ ತನ್ನ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಕೇವಲ ಪುಸ್ತಕದಲ್ಲಿರುವ ಪಠ್ಯಕ್ರಮವನ್ನಷ್ಟೇ ಅಲ್ಲದೆ ನೈತಿಕ, ದೈಹಿಕ, ಸಾಂಸ್ಕೃತಿಕ ಹಾಗೂ ಇನ್ನಿತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸುತ್ತಿರುವುದು ಸಂತಸದ ಸಂಗತಿ. ವಿಶ್ವ ಕೊಂಕಣಿ ವಿಶ್ವವಿದ್ಯಾಲಯವನ್ನು ಸ್ಥಾಪಿಸುವುದಕ್ಕೆ ಈಗಾಗಲೆ ಪ್ರಯತ್ನಿಸುತ್ತಿದ್ದೇವೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕರ್ನಾಟಕ ಕೊಂಕಣಿ ಭಾಷಾ ಅಲ್ಪ ಸಂಖ್ಯಾತರ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಮೋಹನ ಪೈ, ಅವರ ಪತ್ನಿ ಉಷಾ ಪೈ, ಯುವ ವಿಜ್ಞಾನಿ ಪ್ರಶಸ್ತಿ ಪುರಸ್ಕೃತ ಡಾ. ಅರುಣ ಇಸಳೂರು ಉಪಸ್ಥಿತರಿದ್ದು, ಮಾತನಾಡಿದರು. ಅಧ್ಯಕ್ಷತೆಯನ್ನು ಟ್ರಸ್ಟನ ಅಧ್ಯಕ್ಷ ವಿ.ಆರ್.ನಾಯಕ ವಹಿಸಿದ್ದರು. ವೇದಿಕೆಯಲ್ಲಿ ಟ್ರಸ್ಟನ ಉಪಾಧ್ಯಕ್ಷ ಎನ್.ಬಿ.ಶಾನಭಾಗ ಉಪಸ್ಥಿತರಿದ್ದರು.
ರಜತ ಸಂಭ್ರಮದ ಪ್ರಯುಕ್ತ ಟ್ರಸ್ಟನ ನಿಕಟಪೂರ್ವ ಅಧ್ಯಕ್ಷ ದಿ.ಕಾಶೀನಾಥ ನಾಯಕ ಸ್ಮರಣಾರ್ಥ ನೀಡುತ್ತಿರುವ “ಕೊಂಕಣ ಭೂಷಣ” ಪ್ರಶಸ್ತಿಯನ್ನು ಶೌರ್ಯ ಪ್ರಶಸ್ತಿ ಪುರಸ್ಕೃತೆ ಆರತಿ ಕೆ. ಶೇಟ್, ವಿರಾಟ ಭಟ್ಟ, ಜುಯದೀಪ ಎಸ್.ಪ್ರಭು ಅವರಿಗೆ ಪ್ರದಾನ ಮಾಡಲಾಯಿತು.
ಟ್ರಸ್ಟನ ಕಾರ್ಯದರ್ಶಿ ಮುರಲೀಧರ ಪ್ರಭು ಸ್ವಾಗತಿಸಿ ಪ್ರಾಸ್ತಾವಿಸಿದರು. ಕಾರ್ಯಕ್ರಮವನ್ನು ಶಿಕ್ಷಕ ಗಣೇಶ ಜೋಶಿ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ನಡೆದ ಕ್ರೀಡಾ ಸಂಭ್ರಮದಲ್ಲಿ ತುಳಸಿ ಗಿರಿ ಮತ್ತು ವಿದ್ಯಾರ್ಥಿಗಳು, ಬಾಗಲಕೋಟೆ ಇವರಿಂದ ಮಲ್ಲಕಂಬ ಪ್ರದರ್ಶನ, ಮಾತೃಮಂಡಳಿ ಮತ್ತು ಪೂರ್ವ ವಿದ್ಯಾರ್ಥಿಗಳಿಂದ ನೃತ್ಯ ಸಂಭ್ರಮ ಹಾಗೂ ಕುದ್ರೋಳಿ ಗಣೇಶ ಹಾಗೂ ತಂಡದವರಿಂದ ಜಾದು ಪ್ರದರ್ಶನ ನಡೆದವು.