ನವದೆಹಲಿ: ಸರಣಿ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸಿದ್ದ 10 ಮಂದಿ ಶಂಕಿತ ಐಸಿಸ್ ಉಗ್ರರನ್ನು ಉತ್ತರ ಪ್ರದೇಶ ಹಾಗೂ ನವದೆಹಲಿಯಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಬಂಧಿಸಿದೆ ಎಂದು ತಿಳಿದುಬಂದಿದೆ.
ಒಟ್ಟು 16 ಮಂದಿಯನ್ನು ವಶಕ್ಕೆ ಪಡೆಯಲಾಗಿದ್ದು, ಅವರಲ್ಲಿ 10 ಜನರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಸರಣಿ ಬಾಂಬ್ ಸ್ಫೋಟದ ಪ್ಲಾನ್ ಕುರಿತು ಬಾಯಿಬಿಟ್ಟಿದ್ದಾರೆ ಎಂದು ಎನ್ಐಎ ಅಧಿಕಾರಿಗಳು ತಿಳಿಸಿದರು ಎಂದು ವರದಿಯಾಗಿದೆ.
ಉಗ್ರರು ಉತ್ತರ ಪ್ರದೇಶ ಹಾಗೂ ದೆಹಲಿಯನ್ನೇ ಟಾರ್ಗೆಟ್ ಮಾಡಿಕೊಂಡಿದ್ದು, 17 ಕಡೆಗಳಲ್ಲಿ ಬಾಂಬ್ ಸ್ಫೋಟಕ್ಕೆ ಪ್ಲಾನ್ ರೂಪಿಸಿದ್ದರು. ಅವುಗಳಲ್ಲಿ ಉತ್ತರ ಪ್ರದೇಶದ ಅಮ್ರೋಹ, ಹಾಪೂರ್, ಮೀರತ್ ಹಾಗೂ ಲಕ್ನೋ ಸೇರಿದಂತೆ ದೆಹಲಿಯ ಸೀಲಂಪುರ್ ನಲ್ಲಿ ಬಾಂಬ್ ದಾಳಿ ಮಾಡಲು ಪ್ಲಾನ್ ರೂಪಿಸಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದರು ಎನ್ನಲಾಗಿದೆ.
ಭಾರೀ ವೆಚ್ಚದ ಸ್ಫೋಟಕ ಸಾಮಾಗ್ರಿಗಳು, ಶಸ್ತ್ರಾಸ್ತ್ರ ಹಾಗೂ ರಾಕೆಟ್, 100 ಮೊಬೈಲ್ ಫೋನ್, 135 ಸಿಮ್ ಕಾರ್ಡ್ಗಳು, ಲ್ಯಾಪ್ಟಾಪ್ಗಳು ಹಾಗೂ 7.5 ಲಕ್ಷ ಹಣವನ್ನು ಬಂಧಿತರಿಂದ ವಶಕ್ಕೆ ಪಡೆಯಲಾಗಿದೆ,ಅಷ್ಟೇ ಅಲ್ಲದೆ ಸರಣಿ ಬಾಂಬ್ ದಾಳಿಯ ಬಳಿಕ ರಿಮೋಟ್ ಕಂಟ್ರೋಲ್ ಬಾಂಬ್ ಹಾಗೂ ಆತ್ಮಹತ್ಯಾ ಬಾಂಬ್ ಸ್ಫೋಟಕ್ಕೆ ಭಾರೀ ಸಿದ್ಧತೆ ನಡೆಸಿದ್ದರು ಎನ್ನುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದರು.
ಉತ್ತರ ಪ್ರದೇಶದ ಮುಫ್ತಿ ಸೊಹೈಲ್ ಹರ್ಕತ್ ಉಲ್ ಹರ್ಬ್ ಎ ಇಸ್ಲಾಂ’ ಸಂಘಟನೆಯ ನಾಯಕ. ಇವನು ಐಸಿಸ್ ಉಗ್ರ ಸಂಘಟನೆ ಜೊತೆಗೆ ಸಂಪರ್ಕ ಹೊಂದಿದ್ದು, ದೆಹಲಿಯಲ್ಲಿ ಮಸೀದಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ಎನ್ಐಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.