ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ ಹಾಗೂ ಶ್ರೀ ಅಖಿಲ ಹವ್ಯಕ ಮಹಾಸಭೆಯ ಅಮೃತಮಹೋತ್ಸವ ಕಾರ್ಯಕ್ರಮಗಳು ಡಿಸೆಂಬರ್ 28,29 ಹಾಗೂ 30 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿತವಾಗಿದ್ದು, ಈ ಐತಿಹಾಸಿಕ ಕಾರ್ಯಕ್ರಮಗಳು ಸಮಸ್ತ ಹವ್ಯಕ ಸಮಾಜದ ಕಾರ್ಯಕ್ರಮವಾಗಿರುವುದರಿಂದ ಸಮಸ್ತ ಸಮಾಜ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕಾಗಿ ಶ್ರೀ ಅಖಿಲ ಹವ್ಯಕ ಮಹಾಸಭೆ ಕರೆನೀಡುತ್ತದೆ.
ಈ ಐತಿಹಾಸಿಕ ಬೃಹತ್ ಉತ್ಸವದಲ್ಲಿ ನಮ್ಮ ವಿಶಿಷ್ಟವಾದ ಕೃಷಿ – ಕಲೆ – ಪಾಕಗಳ ಸಮಗ್ರ ದರ್ಶನ, ಯಾಜ ಮಂಟಪ – ಯಾಗ ಮಂಡಲ – ದೇಶೀ ಗೋತಳಿಗಳ ಪ್ರದರ್ಶನ, ಸಮಾಜ ಎದುರಿಸುತ್ತಿರುವ ಸಮಸ್ಯೆ ಹಾಗೂ ಅದಕ್ಕೆ ಪರಿಹಾರ ಹಾಗೂ ಸಮಾಜದ ಹಿರಿಮೆ ಗರಿಮೆಗಳನ್ನು ಪ್ರಸ್ತುತಪಡಿಸುವ ವಿಚಾರ ಸಮ್ಮಿಲನಗಳ ಗೋಷ್ಠಿಗಳು ಸೇರಿದಂತೆ ಅನೇಕ ಕಾರ್ಯಕ್ರಮಗಳು ನಡೆಯಲಿವೆ. ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆಗಳು ನಡೆದರೆ, ಮಹಿಳೆಯರಿಗೆ ರಂಗೋಲಿ, ಹೂಕುಂಡ ಕಲಾಸ್ಪರ್ಧೆ ನಡೆದರೆ, ಆಸಕ್ತರಿಗೆ ಕರಕುಶಲವಸ್ತು ಪ್ರದರ್ಶನ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ ನಡೆಯಲಿವೆ.ಇಂದು ಮಲೆನಾಡಿನ ಹಳ್ಳಿಗಳಲ್ಲೂ ಆಲೆಮನೆಗಳು ಕಣ್ಮರೆಯಾಗುತ್ತಿವೆ, ಆದರೆ ಈ ಕಾರ್ಯಕ್ರಮದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಲೆಮನೆಯ ವೈಭವ ಜನರ ಕಣ್ಮನ ಸೆಳೆಯಲಿದೆ.ಉತ್ತರ ಕನ್ನಡ – ದಕ್ಷಿಣ ಕನ್ನಡ ಹಾಗೂ ಶಿವಮೋಗ್ಗ ಪ್ರಾಂತ್ಯಗಳ ಹವ್ಯಕರ ಪಾಕ ವೈವಿಧ್ಯಗಳನ್ನು ಪರಿಚಯಿಸುವ ಹವ್ಯಕ ಪಾಕೋತ್ಸವ ಈ ಕಾರ್ಯಕ್ರಮದ ರುಚಿಯನ್ನು ಹೆಚ್ಚಿಸಲಿದೆ.
ಐತಿಹಾಸಿಕ ಈ ಕಾರ್ಯಕ್ರಮದಲ್ಲಿ 75 ಪುಸ್ತಕ ಲೋಕಾರ್ಪಣೆ, 75 ವೈದೀಕರಿಗೆ ಸನ್ಮಾನ, 75 ಕೃಷಿಕರಿಗೆ ಸನ್ಮಾನ , 75 ಸಾಧಕರಿಗೆ ಸನ್ಮಾನ, 75 ವಿದ್ಯಾರ್ಥಿಗಳಿಗೆ ಸನ್ಮಾನ, 75 ಗೋದಾನ, 75 ಹವ್ಯಕ ಯೋಧರಿಗೆ ಸನ್ಮಾನ ನಡೆಯಲಿದ್ದು, ಆಯಾಯ ಕ್ಷೇತ್ರದಲ್ಲಿ ಸೇವೆಸಲ್ಲಿಸಿದ ಸಮಾಜದ ಗಣ್ಯರನ್ನು ಗೌರವಿಸಲಾಗುತ್ತಿದೆ. 28 ರಂದು ನಾಡಿನ ಶ್ರೇಷ್ಠ ಕಲಾವಿದರಿಂದ ಗೀತ – ನಾಟ್ಯ – ವೈಭವ ನಡೆದರೆ, 29 ರಂದು ಶ್ರೇಷ್ಠ ಯಕ್ಷಕಲಾವಿದರಿಂದ ಯಕ್ಷ ನೃತ್ಯೋತ್ಸವ, 30 ರಂದು ಖ್ಯಾತ ರಂಗಭೂಮಿ ಕಲಾವಿದರಿಂದ ಅಭಿನಯರಂಗ ನಡೆಯಲಿದೆ.
• 75 ಯಾಗ ಮಂಟಪಗಳ ದರ್ಶನ
ಯಜ್ಞ ಯಾಗಗಳು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದ್ದು, ಇಷ್ಟಾರ್ಥಸಿದ್ಧಿಯಿಂದ ಹಿಡಿದು ಪ್ರಮಾರ್ಥ ಪ್ರಾಪ್ತಿಯವರೆಗೆ ಯಜ್ಞಗಳ ವ್ಯಾಪ್ತಿಯಿದೆ. ನಮ್ಮ ಸಂಸ್ಕೃತಿಯ ಭಾಗವಾಗಿರುವ ಯಜ್ಞಗಳ ನಿಯಮಗಳು, ಅದರ ವಿವಿಧತೆಗಳು, ಆಚರಣೆಯ ಬಗೆಗಳು, ಉದ್ದೇಶಗಳು ಮುಂತಾದವನ್ನು ತಿಳಿಸುವ ದೃಷ್ಟಿಯಿಂದ 75 ವಿವಿಧ ರೀತಿಯ ಹೋಮಕುಂಡಗಲ ದರ್ಶನ, ವಿವಿಧ ರೀತಿಯ ಮಂಡಲಗಳ ದರ್ಶನ, ಯಜ್ಞಗಳ ಉದ್ದೇಶ ಹಾಗೂ ಫಲದ ಮಾಹಿತಿ, ದಿನಕ್ಕೊಂದು ಯಾಗದ ಪ್ರಾತ್ಯಕ್ಷಿಯತೆ ಮೂರು ದಿನಗಳ ಕಾಲ ನಡೆಯಲಿದೆ.
• ಅಡಿಕೆ ಸಂಸ್ಕೃತಿಯ ಸಮಗ್ರ ದರ್ಶನ
ಹವ್ಯಕರ ಜೀವನಾಧಾರವಾದ ಅಡಿಕೆ ಕೃಷಿಯ ಸಮಗ್ರ ಪ್ರದರ್ಶನವು ಕೃಷಿ ಜಗತ್ತಿನ ಪ್ರಪಂಚವನ್ನು ಸಮಗ್ರವಾಗಿ ಪ್ರದರ್ಶಿತಗೊಳಿಸಲಿದ್ದು, ವಿವಿಧ ರೀತಿಯ ಅಡಿಕೆ ಸಸಿಗಳು, ತೋಟದ ಕೆಲಸದ ಉಪಕರಣಗಳು, ಕೊನೆ ಕೊಯ್ಯುವ ಸಲಕರಣೆಗಳು, ಅಡಿಕೆ ಸುಲಿಯುವ ಉಪಕರಣಗಳು, ಅಳತೆಯ ಪಾರಂಪರಿಕ ಮಾನದಂಡಗಳು ಸೇರಿದಂತೆ ಪಾರಂಪರಿಕ ವಸ್ತುಗಳ ಪ್ರದರ್ಶನ ಇರಲಿದೆ.
• ರಾಜಧಾನಿಯ ಅರಮನೆಯಲ್ಲಿ ಸಾಂಪ್ರದಾಯಿಕ ಆಲೆಮನೆ.
ಹಳ್ಳಿಸೊಗಡಿನ ಆಲೆಮನೆ ಕಾರ್ಯಕ್ರಮದಲ್ಲಿರಲಿದ್ದು, ಇತ್ತೀಚಿಗೆ ಮಲೆನಾಡು – ಕರಾವಳಿ ಭಾಗದಲ್ಲೇ ಆಲಮನೆಗಳು ಕಣ್ಮರೆಯಾಗಿದ್ದು, ಅರಮ್ನೆ ಮೈದಾನದಲ್ಲಿ ಜೋಡಿ ಕೋಣಗಳ ಆಲೆಗಾಣದ ಪಾರಂಪರಿಕ ಆಲೆಮನೆ ಈ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಲಿದ್ದು, ಆಕರ್ಷಣೆಯ ಕೇಂದ್ರವಾಗಲಿದೆ.
• ಕರಕುಶಲ ವಸ್ತುಗಳ ಪ್ರದರ್ಶನ
ಹವ್ಯಕರ ಕೈ ಕೌಶಲ್ಯದಿಂದ ತಯಾರಿಸಲ್ಪಟ್ಟ ಹಾಗೂ ಹಳ್ಳಿಸೊಗಡಿನ ಹವ್ಯಕರ ಪರಂಪರೆಯ ಜೊತೆಗೆ ಹಾಸುಹೊಕ್ಕಾದ ಪ್ರಾಚೀನ ವಸ್ತುಗಳಾದ ಕಡಗೋಲು, ಕೆರೆಮಣೆ, ಕಲ್ಲಿ,ಹೆಗಡೆ, ದೋಟಿ, ಕಡಕಲನಮನೆ ಮುಂತದವುಗಳು, ಬಿದಿರಿನ ಕಲೆ, ಕೌದಿಕಲೆ, ಅಸೂತಿ ಕಲೆ, ಜನಪದ ಶೈಲಿಯ ನೇಯ್ಗೆ, ಕಾಷ್ಠ ಕಲೆಗಳು ಇಲ್ಲಿರಲಿದೆ.
• ಕಲಾ ಸಂಜೆಗಳು
ಡಿ. 28 ರಂದು ನಾಡಿನ ಶ್ರೇಷ್ಠ ಕಲಾವಿದರಿಂದ ಗೀತ – ನಾಟ್ಯ – ವೈಭವ ನಡೆದರೆ, 29 ರಂದು ಶ್ರೇಷ್ಠ ಯಕ್ಷಕಲಾವಿದರಿಂದ ಯಕ್ಷ ನೃತ್ಯೋತ್ಸವ, 30 ರಂದು ಖ್ಯಾತ ರಂಗಭೂಮಿ ಕಲಾವಿದರಿಂದ ಅಭಿನಯರಂಗ ನಡೆಯಲಿದೆ.
• ರಾಮಕಥಾ ಪ್ರಸ್ತುತಿ
ಯಜ್ಞಗಳ ಮಹತಿಯನ್ನು ಸಮಾಜಕ್ಕೆ ತಿಳಿಸುವ ಪ್ರಯತ್ನವಾಗಿ ಪ್ರಸಿದ್ಧ ರಾಮಕಥಾ ಮಾದರಿಯಲ್ಲಿ “ಯಜ್ಞ ಧಾರಿಣಿ” ರಾಮಕಥಾ ಪ್ರಸ್ತುತಿ ಆಯೋಜಿಸಲಾಗಿದೆ. ಪ್ರವಚನ – ಗಾಯನ – ವಾದನ – ಚಿತ್ರ – ರೂಪಕಗಳ ವಿಶಿಷ್ಟ ಸಂಯೋಜನೆಯಲ್ಲಿ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳು ನಡೆಸಿಕೊಡಲಿದ್ದಾರೆ.
• ಸಾಮೂಹಿಕ ಭಗವದ್ಗೀತಾ ಪಠಣ
ಶ್ರೀಮದ್ಬಗವದ್ಗೀತೆ ಭಾರತೀಯರೆಲ್ಲರಿಗೂ ಪೂಜನೀಯವಾಗಿದ್ದು, ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನದ ಉದ್ಘಾಟನಾ ದಿನದಂದು ಸ್ವರ್ಣವಲ್ಲಿ ಸಂಸ್ಥಾನದ ಶ್ರೀಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳ ನೇತೃತ್ವದಲ್ಲಿ ‘ಸಾಮೂಹಿಕ ಭಗವದ್ಗೀತಾ ಪಠಣ’ ನಡೆಯಲಿದ್ದು, ಶ್ರೀಕೃಷ್ಣನ ಸಂದೇಶವನ್ನು ಜಗತ್ತಿಗೆ ಸಾರಲಿದೆ.
• ಹವ್ಯಕ ಪಾಕೋತ್ಸವ – ಆಹಾರ ಮೇಳ
ಹವ್ಯಕ ಸಂಸ್ಕೃತಿಯಲ್ಲಿ ಆಹಾರಕ್ಕು ವಿಶೇಷ ಮಾನ್ಯತೆ ಇದ್ದು, ಹವ್ಯಕರ ಪಾಕ ವೈವಿಧ್ಯಗಳು ನಾಡಿನ ಜನಮನ್ನಣೆ ಪಡೆದಿವೆ. ಮಲೆನಾಡು – ಕರಾವಳಿ ಭಾಗಗಳ ಪಾರಂಪರಿಕ ಹವ್ಯಕ ಪಾಕಗಳು ಈ ಐತಿಹಾಸಿಕ ಕಾರ್ಯಕ್ರಮದ ರುಚಿಯನ್ನು ಹೆಚ್ಚಿಸಲಿದ್ದು, ಪತ್ರೊಡೆ, ಕೊಟ್ಟೆಕಡುಬು, ವಿವಿಧ ರೀತಿಯ ಅವಲಕ್ಕಿಗಳು, ಗೆಣೆಸೆಲೆ, ಜಿಲೇಬಿ, ಅತ್ರಾಸ, ಚಕ್ಕುಲಿ, ಸುಕ್ಕಿನುಂಡೆ, ಕೇಸರಿ, ತಂಬಳಿ, ಪಾಯಸಗಳು, ಹೋಳಿಗೆಗಳು ಜನಾಕರ್ಷಣೆಯ ಕೇಂದ್ರವಾಗಲಿದೆ.
• ಸರ್ವ ಸಮಾಜದವರಿಗೂ ಮುಕ್ತ
ಈ ಬೃಹತ್ ಕಾರ್ಯಕ್ರಮ ಸರ್ವ ಸಮಾಜದವರಿಗೂ ಮುಕ್ತವಾಗಿದ್ದು, ಎಲ್ಲಾ ಸಮಾಜದ ಬಂಧುಗಳೂ ಕಾರ್ಯಕ್ರಮದಲ್ಲಿ ಭಾಗವಹಿಸಿ ; ಹವ್ಯಕ ಸಂಸ್ಕೃತಿ – ಸಂಸ್ಕಾರ ಹಾಗೂ ವೈವಿಧ್ಯಮಯ ಕಾರ್ಯಕ್ರಮಗಳನ್ನು ಕಣ್ತುಂಬಿಕೊಳ್ಳಬಹುದಾಗಿದ್ದು, ಹವ್ಯಕರ ವಿಶಿಷ್ಟ ಆಹಾರ ಪದಾರ್ಥಗಳನ್ನು ಪಾಕೋತ್ಸವದಲ್ಲಿ ಆಸ್ವಾದಿಸಬಹುದಾಗಿದೆ.
ಹವ್ಯಕ ಸಮಾಜ ಒಂದು ಕುಟುಂಬವಾಗಿ ತನ್ನ ಶಕ್ತಿ, ಸಾಮಥ್ರ್ಯ ಹಾಗೂ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸುವ ಐತಿಹಾಸಿಕ ಕಾರ್ಯಕ್ರಮದಲ್ಲಿ ಸಮಾಜದ ಪ್ರತಿಯೊಬ್ಬರೂ ಭಾಗವಹಿಸಬೇಕು ಎಂಬುದು ಮಹಾಸಭೆಯ ಆಶಯವಾಗಿದ್ದು, ಮೂರೂ ದಿನಗಳ ಕಾಲ ಆಗಮಿಸಿ, ಅಮೃತಮಹೋತ್ಸವ ಹಾಗೂ ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳುವಂತೆ ಸಮಾಜದ ಪ್ರತಿಯೊರ್ವ ಬಂಧುಗಳನ್ನೂ ಪ್ರೀತಿ ಪೂರ್ವಕವಾಗಿ ಆಹ್ವಾನಿಸುತ್ತೇವೆ.