ಭಟ್ಕಳ : ತಾಲೂಕಾ ಆಡಳಿತದಿಂದ ವಿಶ್ವ ಮಾನವ ದಿನಾಚರಣೆ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ತಹಶೀಲ್ದಾರ ಶಂಕರ ಗೌಡಿ ಮಾತನಾಡಿ ಯುಗದ ಕವಿ ಎಂದು ಕರೆಸಿಕೊಂಡ ಕುವೆಂಪು ಕನ್ನಡ ನಾಡಿನ ಶ್ರೇಷ್ಟ ಕವಿ. ಅವರು ನೀಡಿದ ವಿಶ್ವಮಾನವ ಸಂದೇಶ ಸಾರ್ವಕಾಲಿಕವಾದುದು. ಆ ವರೆಗೂ ಕೇವಲ ಮೇಲ್ವರ್ಗದವರಿಗೆ ಮಾತ್ರ ಸೀಮಿತವಾಗಿದ್ದ ಸಾಹಿತ್ಯ ಕ್ಷೇತ್ರದಲ್ಲಿ ಹಿಂದುಳಿದ ಸಮುದಾಯದಿಂದ ಬಂದ ಕುವೆಂಪು ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದರು ಎಂದು ನುಡಿದರು.
ವಿಶೇಷ ಉಪನ್ಯಾಸ ನೀಡಿದ ಕಸಾಪ ಅಧ್ಯಕ್ಷ ಗಂಗಾಧರ ನಾಯ್ಕ ಮಾತನಾಡಿ ಕುವೆಂಪು ಕನ್ನಡ ನಾಡಿನ ಸಾಂಸ್ಕೃತಿಕ ಸಾಹಿತ್ಯಿಕ ರಾಯಭಾರಿಯಾಗಿ, ಓರ್ವ ದಾರ್ಶನಿಕನಾಗಿ ವಿಶ್ವಮನ್ನಣೆ ಗಳಿಸುವಂತಹ ಸಾಹಿತ್ಯ ಕೃತಿಗಳನ್ನು ರಚಿಸಿ ಕನ್ನಡ ಮಾತೆಗೆ ಜ್ಞಾನಪೀಠ ಪ್ರಶಸ್ತಿಯ ಮೊದಲ ಚಿನ್ನದ ಬಳೆಯನ್ನು ತೊಡಿಸಿದರು. ಕನ್ನಡ ಸಾರಸ್ವತ ಲೋಕದಲ್ಲಿ ಶಾಶ್ವತವಾಗಿ ನಿಲ್ಲುವಂತಹ ಕೃತಿಗಳನ್ನು ನೀಡಿದರಲ್ಲದೇ ಮನುಜಮತ ಎಲ್ಲರ ಮತವಾಗಬೇಕು, ವಿಶ್ವಪಥ ಎಲ್ಲರ ಪಥವಾಗಬೇಕೆಂಬ ಸಂದೇಶ ನೀಡಿದರು. ನುಡಿದಂತೆ ನಡೆದ,ಬರೆದಂತೆ ಬದುಕಿದ, ಲೋಕದ ಹಿತಕ್ಕಾಗಿ ಕೃತಿ ರಚಿಸಿದ, ವ್ಯಕ್ತಿಯಾದ ಕುವೆಂಪು ಅವರ ವ್ಯಕ್ತಿತ್ವ ಅನನ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಎಮ್.ಆರ್.ಮುಂಜಿ ಮಾತನಾಡಿ ಕುವೆಂಪು ಅವರ ಕೃತಿಗಳನ್ನು ಓದಿ, ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳುವ ಮೂಲಕ ವಿಶ್ವ ಮಾನವ ದಿನಾಚರಣೆಗೆ ಅರ್ಥ ತರುವಂತಾಗಬೇಕೆಂದರು. ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದ ತಾ.ಪಂ. ಪ್ರಭಾರ ಕಾರ್ಯನಿರ್ವಹಣಾಧಿಕಾರಿಗಳಾದ ಪ್ರಭಾಕರ ಚಿಕ್ಕನಮನೆ, ಮಾತನಾಡಿದರು. ಶಿಕ್ಷಕ ಸುರೇಶ ಮುರ್ಡೇಶ್ವರ ವಿಶ್ವಮಾನವ ಗೀತೆ ಹಾಡಿ ಎಲ್ಲರನ್ನು ಸ್ವಾಗತಿಸಿ ನಿರೂಪಿಸಿದರು. ತಾ. ಪಂ.ನ ವ್ಯವಸ್ಥಾಪಕ ಸುಧೀರ ಗಾಂವಕರ ವಂದಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.