ಸಮಾಜ ಪುರುಷ ಮೈಕೊಡವಿ ಎದ್ದು ನಿಂತಿರುವ ಈ ಸನ್ನಿವೇಷವೇ ವಿಶ್ವ ಹವ್ಯಕ ಸಮ್ಮೇಳನ, ಸಮುದ್ರೋಲ್ಲಂಘನ ಸಮಯದಲ್ಲಿ ಆಂಜನೇಯ ಮೈಕೊಡವಿ ಎದ್ದು ನಿಂತನಂತೆ, ಆಗ ಸಹಸ್ರಾರು ಜನ ಅವನನ್ನು ಆಶ್ಚರ್ಯ ಚಕಿತರಾಗಿ ನೋಡಿದರಂತೆ, ಹಾಗೆಯೇ ಹವ್ಯಕ ಸಮಾಜ ಮೈಕೊಡವಿ ಜಾಗೃತವಾಗಿ ನಿಂತಿದೆ. ಜಗತ್ತು ಇದನ್ನು ಗಮನಿಸಬೇಕು ಎಂದು ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.
ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನದ ಐತಿಹಾಸಿಕ ಸಭೆಯಲ್ಲಿ ಸಾನ್ನಿಧ್ಯವಹಿಸಿ ಆಶೀರ್ವಚನ ಅನುಗ್ರಹಿಸಿದ ಪೂಜ್ಯ ಶ್ರೀಗಳು, ಈ ಐತಿಹಾಸಿಕ ಕಾರ್ಯಕ್ರಮವನ್ನು ಮಹಾದೀಪಾವಳಿ ಎಂದು ಭಾವಿಸುತ್ತೇವೆ. ದೀಪಾವಳಿಯಲ್ಲಿ ಮನೆಯವರೆಲ್ಲ ಸೇರಿ ಸಂಭ್ರಮಿಸುತ್ತಾರೆ. ಇಲ್ಲಿ ವಿಶ್ವದ ಎಲ್ಲಾ ಭಾಗಗಳ ಹವ್ಯಕರು ಬಂದು ಸೇರಿದ್ದೀರಿ, ವಿಶ್ವವೇ ಒಂದು ಕುಟುಂಬವಾಗಿ ಸಂಘಟಿತರಾಗಿ ಸಂಭ್ರಮಿಸಿದ್ದೀರಿ, ಎಲ್ಲರ ಮುಖದಲ್ಲೂ ಸಂತಸವಿದೆ ಇದು ಸಂತಸದ ವಿಚಾರ ಎಂದರು.
ವಿವಾದಗಳು, ಕಾರ್ಯಕ್ರಮಗಳನ್ನು ಹಾಳು ಮಾಡಲು ಯೋಚಿಸುವುದು ಎಲ್ಲಾ ದೊಡ್ಡ ಕಾರ್ಯಕ್ರಮಗಳಲ್ಲಿಯೂ ಇರುತ್ತದೆ. ಆದರೆ ನಾವು ಸಕಾರಾತ್ಮಕವಾಗಿರಬೇಕು, ರಚನಾತ್ಮಕವಾಗಿ ತೊಡಗಿಸಿಕೊಳ್ಳಬೇಕು. ಸಮುದ್ರ ಮಥನ ನಡೆದು ವಿಷ ಬಂದ ನಂತರವಷ್ಟೇ ಅಮೃತ ಸಿಗುವಂತದ್ದು ಎಂದ ಶ್ರೀಗಳು, ಇಂತಹ ಕಾರ್ಯಕ್ರಮಗಳನ್ನು ಬಿಟ್ಟುಕೊಳ್ಳ ಬಾರದು, ಯಾವುದೋ ಕಾರಣದಿಂದ ಹೊರಗುಳಿದರೆ ಅಂತವರಿಗೆ ಬನ್ನಿ! ಸಮಾಜದ ಜೊತೆ ಸೇರಿ ಎಂಬ ಕರೆಯನ್ನು ಕೊಡುತ್ತೇವೆ ಎಂದು ಕರೆ ನೀಡಿದರು.
ಮೂಲ ದಕ್ಷಿಣಾಮ್ನಾಯ ಕೂಡ್ಲಿ ಶೃಂಗೇರಿ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ವಿದ್ಯಾಭಿನವ ವಿದ್ಯಾರಣ್ಯಭಾರತೀ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ಭಗವಾನ್ ಶ್ರೀರಾಮ ಯಜ್ಞದ ಮೂಲಕ ಬಂದ ಪಾಯಸದ ಪ್ರಭಾವದಿಂದ ಹುಟ್ಟಿದವನು, ಅಂತೆಯೇ ಯಜ್ಞ – ಯಾಗಗಳ ಜೊತೆಗೆ ಅವಿನಾಭಾವ ಸಂಬಂಧ ಹೊಂದಿದ ಸಮಾಜ ಹವ್ಯಕ ಸಮಾಜ.
ಇಂದು ಮಠಮಾನ್ಯಗಳ ಮೇಲೆ ದಾಳಿಗಳಾಗುತ್ತಿದ್ದು, ಸಮಾಜ ಇದನ್ನು ಖಂಡಿಸಬೇಕಿದೆ. ಕೈಯನ್ನು ಮುಷ್ಟಿ ಮಾಡಿದಾಗ ಶಕ್ತಿ ಉಂಟಾಗುತ್ತದೆ, ಅಂತೆಯೇ ಸಮಾಜ ಸಂಘಟಿತವಾದಾಗ ಅದಕ್ಕೆ ಶಕ್ತಿ ಬರುತ್ತದೆ ಎಂದರು.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮಾತನಾಡಿ, ಅಂದು ಮಯೂರ ವರ್ಮನ ಕಾಲದಲ್ಲಿ ತಮ್ಮ ಜ್ಞಾನದಿಂದ ಗುರುತಿಸಿಕೊಂಡವರು ಹವ್ಯಕರು, ಇಂದಿಗೂ ತಮ್ಮ ಆ ಜ್ಞಾನದ ಪರಂಪರೆಯನ್ನು ಉಳಿಸಿಕೊಂಡವರು ಹವ್ಯಕರು. 75 ವರ್ಷಗಳ ಕಾಲ ಸಂಘಟನೆಯನ್ನು ನಡೆಸುವುದು ಸುಲಭದ ಮಾತಲ್ಲ, ಪ್ರಜ್ಞಾವಂತ ಸಮಾಜವಾದ ಈ ಹವ್ಯಕ ಸಮಾಜ ಅದನ್ನು ಸಾಧಿಸಿತೋರಿಸಿದೆ ಎಂದರು.
ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಸಂಕುಚಿತ ಮನೋಭಾವ ಇಲ್ಲದೇ, ವಿಶಾಲದೃಷ್ಟಿಯಿಂದ ನೋಡುವವನು ನಿಜವಾದ ಬ್ರಾಹ್ಮಣ. ಆಪತ್ತು ವಿಪತ್ತು ಎದುರಾದರೂ ಸತ್ಯಪಥವನ್ನು ಬಿಡದವರು ಬ್ರಾಹ್ಮಣರು, ಅದರ ಮೂರ್ತರೂಪ ಹವ್ಯಕ ಜನಾಂಗ.ಹವ್ಯಕ ಸಮಾಜ ಬದಲಾಗಿಲ್ಲ, ಅಂದು ಅಗ್ನಿಮುಖದಲ್ಲಿ ಮಾತ್ರ ಯಜ್ಞ ನಡೆಯುತ್ತಿತ್ತು, ಇಂದು ಎಲ್ಲಾ ಕ್ಷೇತ್ರಗಳಲ್ಲಿ ಜ್ಞಾನಯಜ್ಞವನ್ನು ಸಮಾಜದ ಬಂಧುಗಳು ಮಾಡುತ್ತಾರೆ ಎಂದರು.
ಕೇಂದ್ರ ಸಚಿವ ಸದಾನಂದ ಗೌಡ ಮಾತನಾಡಿ, ಸಮುದಾಯದ ಸಂಘಟನೆಗಳು ಇತರ ಸಮುದಾಯದ ಮೇಲೆ ದಾಳಿಗಲ್ಲ, ಅದು ಲೋಕದ ಒಳಿತಿಗೆ ಕಾರಣವಾಗಬೇಕು. ಒಬ್ಬ ಕೇಂದ್ರ ಸಚಿವನಾಗಿ ಹವ್ಯಕ ಸಮಾಜದ ಸಂಸ್ಕೃತಿ ಸಂಪ್ರದಾಯಗಳ ರಕ್ಷಣೆಗೆ ನಾನು ಬದ್ಧನಾಗಿದ್ದೇನೆ. ಆಕ್ರಮಣಗಳಾಗಲು ಅವಕಾಶ ನೀಡುವುದಿಲ್ಲ ಎಂದರು.
ವಿಶ್ವವಾಣಿ ಪತ್ರಿಕೆಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಮಾತನಾಡಿ, ಅರ್ಥವಿಲ್ಲದ – ಆಧಾರರಹಿತ ನೂರಾರು ಪ್ರಶ್ನೆಗಳಿಗೆ ಅರಮನೆ ಮೈದಾನದ ವಿಶ್ವ ಹವ್ಯಕ ಸಮ್ಮೇಳನ ಉತ್ತರವಾಗಿದೆ. ನಮ್ಮಲ್ಲಿ ಧಿಕ್ಕಾರ – ಬಹಿಷ್ಕಾರಗಳಿಗೆ ಬೆಲೆಯಿಲ್ಲ, ಜೈಕಾರಕ್ಕಷ್ಟೇ ನಮ್ಮಲ್ಲಿ ಬೆಲೆ ಎಂಬುದನ್ನು ವಿರಾಟ್ ಹವ್ಯಕ ಸಮುದಾಯ ಸಾಕ್ಷ್ಯೀಕರಿಸಿದೆ ಎಂದರು.
ಅವಿಚ್ಛಿನ್ನ ಪರಂಪರೆಯ ಸಂರಕ್ಷಣೆಗೆ ಸಮಾಜವಿದೆ : ಪ್ರಪಂಚದ ಏಕಮೇವ ಅದ್ವಿತೀಯ ಅವಿಚ್ಛಿನ್ನ ಶಂಕರಪರಂಪರೆಯನ್ನು ಹೊಂದಿರುವ ಕೀರ್ತಿ ಹವ್ಯಕ ಸಮಾಜದ್ದು, ಇದರ ವಿರುದ್ಧ ಆಕ್ರಮಣಗಳನ್ನು ಸಮಾಜ ಸಹಿಸುವುದಿಲ್ಲ. ಅಂತಹ ಆಕ್ರಮಣಗಳಿಗೆ ಈ ತುಂಬಿದ ಸಭೆ ಉತ್ತರವಾಗಿದ್ದು, ಗುರುಪೀಠದ ರಕ್ಷಣೆಗೆ ಸಮಾಜ ಸದಾ ಸಿದ್ಧವಾಗಿದೆ ಎಂದು ಡಾ. ಕಜೆ ಹೇಳುತ್ತಿದ್ದಂತೆ ಸಭೆಯಲ್ಲಿ ಚಪ್ಪಾಳೆಯ ಸುರಿಮಳೆಗಳ ಮೂಲಕ ಬಾರಿ ಜನಬೆಂಬಲ ವ್ಯಕ್ತವಾಯಿತು.
ರಾಮಕೃಷ್ಣಾಶ್ರಮದ ಪೂಜ್ಯ ಶ್ರೀಚಂದ್ರಶೇಖರಾನಂದಜಿ, ನ್ಯಾಯಮೂರ್ತಿ ಶೈಲೇಂದ್ರ ಕುಮಾರ್, ಸಂಸದ ನಳಿನ್ ಕುಮಾರ್ ಕಟೀಲ್, ಬಿ ವೈ ರಾಘವೇಂದ್ರ, ಶಾಸಕರಾದ ರವಿಸುಬ್ರಹ್ಮಣ್ಯ, ಅಶ್ವತ್ಥನಾರಾಯಣ್, ಆರತಿ ಕೌಂಡಿನ್ಯ, ಉಪಸ್ಥಿರಿದ್ದು, ತಮ್ಮ ಸಂದೇಶವನ್ನು – ಹವ್ಯಕ ಸಮುದಾಯದ ಮೇಲಿರುವ ತಮ್ಮ ಒಲವನ್ನು ವ್ಯಕ್ತಪಡಿಸಿದರು. ಸಮ್ಮೇಳನದ ಗೌರವಾಧ್ಯಕ್ಚರಾದ ಶ್ರೀ ಭೀಮೇಶ್ವರ ಜೋಷಿಯವರು ಧನ್ಯವಾದ ಸಮರ್ಪಿಸಿ, ಗೌರವ ಸಮರ್ಪಿಸಿದರು. 75 ಗೋದಾನ ಕಾರ್ಯಕ್ರಮವನ್ನು ಸಾಂಕೇತಿಕವಾಗಿ ಗೋವು ಹಸ್ತಾಂತರ ಮಾಡುವುದರ ಮೂಲಕ ಚಾಲನೆ ನೀಡಲಾಯಿತು.
ಹವ್ಯಕ ಯೋಧ ರತ್ನ ;
ಇದಕ್ಕೂ ಮೊದಲು ಸೇನಾಪಡೆಗಳಲ್ಲಿ ಸೇವೆಸಲ್ಲಿಸಿದ ಹಾಗೂ ಸಲ್ಲಿಸುತ್ತಿರುವ 75 ಧೀರಯೋಧರಿಗೆ “ಹವ್ಯಕ ದೇಶರತ್ನ” ಪುರಸ್ಕಾರ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಶ್ರೀ ಚಕ್ರವರ್ತಿ ಸೂಲಿಬೆಲೆ, ಬ್ರಾಹ್ಮಣ ಸಮಾಜ ದೇಶಕ್ಕೆ ಏನು ಮಾಡಿದೆ ಎಂಬ ಪ್ರಶ್ನೆ ಎದುರಾದರೆ ಇದೊಂದು ಕಾರ್ಯಕ್ರಮದ ಫೋಟೋ ತೋರಿಸಿದರೆ ಸಾಕು, ಪ್ರಶ್ನೆ ಕೇಳಿದವರಿಗೆ ಉತ್ತರ ಸಿಗುತ್ತದೆ. ಬಿ.ಎಸ್.ಎಫ್ ನ ಮೊದಲ ಮಹಿಳಾ ಯೋಧೆ ಸ್ಪೂರ್ತಿ ಭಟ್ ಸೇರಿದಂತೆ ಯುದ್ಧದಲ್ಲಿ ಹೋರಾಡಿ ದೇಶ ಸೇವೆ ಸಲ್ಲಿಸುತ್ತಿರುವ ಈ ಅನರ್ಘ್ಯರತ್ನರನ್ನು ಸನ್ಮಾನಿಸುತ್ತಿರುವ ಹವ್ಯಕ ಮಹಾಸಭೆಯ ಕಾರ್ಯ ಶ್ಲಾಘನೀಯ. ಯುದ್ಧ ಗೆಲ್ಲುವುದು ಶಸ್ತ್ರಗಳಿಂದ ಅಲ್ಲ, ಶಸ್ತ್ರಗಳ ಹಿಂದೆ ಇರುವ ಸೈನಿಕರ ಆತ್ಮಸ್ಥೈರ್ಯದಿಂದ. ಭಾರತೀಯ ಸೇನೆಯಲ್ಲಿ ಆಧುನಿಕ ಶಸ್ತ್ರಾಸ್ತ್ರಗಳು ಇಲ್ಲದ ಕಾಲದಲ್ಲೂ ದೇಶ ಯುದ್ಧ ಗೆದ್ದಿದೆ, ಇದಕ್ಕೆ ನಮ್ಮ ಸೈನಿಕರ ಧೈರ್ಯ ಕಾರಣ ಎಂದು ಅಭಿಪ್ರಾಯಪಟ್ಟರು.
ವಿದ್ಯಾರತ್ನ ಪ್ರಶಸ್ತಿ ಪ್ರದಾನ ಮಾಡಿದ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರು ಮಾತನಾಡಿ, ಬಹುತೇಕ ಮಠಗಳು ನಾಟಕ ಕಂಪನಿಗಳಾಗಿವೆ. ಆದರೆ ಶ್ರೀರಾಮಚಂದ್ರಾಪುರಮಠದ ಶ್ರೀಗಳು ಹಾಗಲ್ಲ, ನಿಜವಾದ ಸಂತರು ಅವರು. ಹಾಗಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಂತಸವಾಗುತ್ತದೆ ಎಂದು ತಮ್ಮ ಭಾವ ವ್ಯಕ್ತಪಡಿಸಿದರು.