ಕುಮಟಾ: ಡಿ. 13ರಂದು ರಾತ್ರಿ ಆಳ ಸಮುದ್ರದ ಮೀನುಗಾರಿಕೆಗೆಸುವರ್ಣ ತ್ರಿಭುಜ ಎಂಬ ಬೋಟಿನ ಮೇಲೆ ಕುಮಟಾದ ಹೊಲನಗದ್ದೆ ನಿವಾಸಿ ಲಕ್ಷ್ಮಣ ನಾರಾಯಣ ಹರಿಕಂತ್ರ, ಮಾದನಗೇರಿ ನಿವಾಸಿ ಸತೀಶ ಈಶ್ವರ ಹರಿಕಂತ್ರ, ಹೊನ್ನಾವರ ತಾಲೂಕಿನ ಮಂಕಿ ನಿವಾಸಿ ರವಿ ನಾಗಪ್ಪ ಹರಿಕಂತ್ರ, ಭಟ್ಕಳದ ಹರೀಶ ಶನಿಯಾರ ಮೊಗೇರ, ದಾಮೋದರ, ರಮೇಶ ಶನಿಯಾರ ಮೊಗೇರ, ಬಾಲಚಂದ್ರ ಮಲ್ಪೆ ಸೇರಿದಂತೆ 7 ಜನ ಮೀನುಗಾರರು ತೆರಳಿದ್ದರು. 2 ದಿನಗಳ ನಂತರ ಇತರ ಬೋಟಿನ ಸಂಪರ್ಕಕ್ಕೆ ಸಿಕ್ಕಿದ್ದನ್ನು ಹೊರತು ಪಡಿಸಿದರೆನಂತರದ ದಿನದಲ್ಲಿ ಯಾವುದೇ ಸಂಪರ್ಕಕ್ಕೆ ಸಿಗಲಿಲ್ಲ.ಅದಾದ ಬಳಿಕ ಅಲ್ಲೇ ಮೀನುಗಾರಿಕೆಯಲ್ಲಿ ನಿರತ ಬೋಟ್‍ಗಳು ಇವರ ಹುಡುಕಾಟ ನಡೆಸಿದ್ದಾರೆ ಆದರೆ ಯಾವುದೇ ಫಲಪ್ರದವಾಗಲಿಲ್ಲ.
ಇದರ ನಿಮಿತ್ತ ಕಳೆದ 18 ದಿನಗಳ ಹಿಂದೆ ಮೀನುಗಾರಿಕೆಗೆ ತೆರಳಿ ನಾಪತ್ತೆಯಾದ ಮಲ್ಪೆಯ ಸುವರ್ಣ ತ್ರಿಭುಜ ಬೋಟ್ ಹಾಗೂ ಅದರಲ್ಲಿರುವ 7 ಜನ ಮೀನುಗಾರರನ್ನು ಸುರಕ್ಷಿತವಾಗಿ ಹುಡುಕಿ ತರಬೇಕೆಂದು ಒತ್ತಾಯಿಸಿ ಕುಮಟಾ ಮೀನುಗಾರರ ಸಂಘಟನೆ ವತಿಯಿಂದ ಸಹಾಯಕ ಕಮೀಷನರ್‌ಗೆ ಮನವಿ ಸಲ್ಲಿಸಿದರು.
ಡಿ. 23 ರಂದು ಬೋಟ್‍ನ ಮಾಲೀಕರು ಕರಾವಳಿ ಕಾವಲು ಪೊಲೀಸ್ ಅಧೀಕ್ಷಕರ ಕಚೇರಿಗೆ ಮಾಹಿತಿ ನೀಡಿ, ನಾಪತ್ತೆ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ಕರಾವಳಿ ಕಾವಲು ಪೊಲೀಸ್ ಕೋಸ್ಟ್ ಗಾರ್ಡ್, ನೇವಿ ಇಲಾಖೆಯ ಸಿಬ್ಬಂದಿಗಳು ತನಿಖೆಯ ಕಾರ್ಯ ಪ್ರಾರಂಭಿಸಿದರೂ ಯಾವುದೇ ಸುಳಿವು ಸಿಗಲಿಲ್ಲ. ಇಂತಹ ಬಡ ಮೀನುಗಾರರು ಉಗ್ರಗಾಮಿಗಳ, ಭಯೋತ್ಪಾದಕರ ಅಥವಾ ದೇವಗಢ, ರೋಯಲ್‍ಗಢ, ರತ್ನಾಗಿರಿಯಲ್ಲಿನ ಕಡಲ್ಗಳ್ಳರ ವಶದಲ್ಲಿದ್ದಾರೆಯೋ ಎಂದು ನಾಪತ್ತೆಯಾದ ಕುಟುಂಬದವರು ದುಃಖದ ಮಡುವಿನಲ್ಲಿದ್ದಾರೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಈ ವಿಷಯ ಆತಂಕ ಹಾಗೂ ಅತ್ಯಂತ ಗಂಭೀರ ಸ್ಥಿತಿಯಲ್ಲಿದ್ದರೂ ರಾಜ್ಯ ಮತ್ತು ಕೇಂದ್ರ ಸರ್ಕಾರ ಮೀನುಗಾರರನ್ನು ಹುಡುಕುವಲ್ಲಿ ವಿಳಂಬ ನೀತಿ ಹಾಗೂ ನಿರ್ಲಕ್ಷ ತೋರಿಸುತ್ತಿದೆ. ತಾವು ಮುತುವರ್ಜಿವಹಿಸಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು, ಮಂತ್ರಿಗಳು ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರದ ಗಮನಕ್ಕೆ ತಂದು ನಾಪತ್ತೆಯಾದ 7 ಜನ ಮೀನುಗಾರರು ಸುರಕ್ಷಿತವಾಗಿ ಮರಳುವಂತೆ ಮಾಡಬೇಕು. ಈ ಬೇಡಿಕೆಯನ್ನು 4 ದಿನದೊಳಗೆ ಈಡೇರಿಸದಿದ್ದರೆ ಮೀನುಗಾರರು ಜಿಲ್ಲೆಯಾದ್ಯಂತ ಉಗ್ರವಾದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.