ನವದೆಹಲಿ: 8ನೇ ತರಗತಿ ವರೆಗಿನ ಮಕ್ಕಳನ್ನು ಅನುತ್ತೀರ್ಣಗೊಳಿಸಬಾರದು ಎಂಬ ನಿಯಮವನ್ನು ರದ್ದುಪಡಿಸುವ ಮಸೂದೆಯೊಂದಕ್ಕೆ ಸಂಸತ್ತು ಗುರುವಾರ ಅನುಮೋದನೆ ನೀಡಿದೆ. ಹೀಗಾಗಿ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡದ ವಿದ್ಯಾರ್ಥಿಗಳನ್ನು ಇನ್ನು ಮುಂದೆ ರಾಜ್ಯ ಸರ್ಕಾರದ ಶಾಲೆಗಳು ಅನುತ್ತೀರ್ಣಗೊಳಿಸಬಹುದಾಗಿದೆ.
ಕಡ್ಡಾಯ ಮತ್ತು ಉಚಿತ ಶಿಕ್ಷಣ (ತಿದ್ದುಪಡಿ) ಮಸೂದೆ- 2019ಕ್ಕೆ ರಾಜ್ಯಸಭೆಯಲ್ಲಿ ಗುರುವಾರ ಧ್ವನಿ ಮತದಿಂದ ಅನುಮೋದನೆ ನೀಡಲಾಗಿದೆ. ಈ ಮಸೂದೆಗೆ ಕಳೆದ ವರ್ಷದ ಜು.18ರಂದು ಲೋಕಸಭೆಯಲ್ಲಿ ಅನುಮೋದನೆ ನೀಡಲಾಗಿತ್ತು. ತಿದ್ದುಪಡಿ ಮಸೂದೆ ರಾಷ್ಟ್ರಪತಿಗಳ ಅನುಮೋದನೆಯ ಬಳಿಕ ಕಾಯ್ದೆ ಆಗಿ ಜಾರಿ ಆಗಲಿದೆ.
ಕಡ್ಡಾಯ ಶಿಕ್ಷಣ ಕಾಯ್ದೆಯ ಅಡಿಯಲ್ಲಿ ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸದೇ ಇರುವ ಕ್ರಮದಿಂದ ಶಿಕ್ಷಣ ಗುಣಮಟ್ಟಕುಸಿತವಾಗುತ್ತಿರುವುದರಿಂದ ನಿಯಮವನ್ನು ಬದಲಾಯಿಸುವಂತೆ 25 ರಾಜ್ಯಗಳು ಕೇಂದ್ರಕ್ಕೆ ಬೇಡಿಕೆ ಇಟ್ಟಿದ್ದವು. ಇದೇ ವೇಳೆ, ವಿದ್ಯಾರ್ಥಿಗಳ ಸಮಗ್ರ ಮೌಲ್ಯಮಾಪನದ ದೃಷ್ಟಿಯಿಂದ ಮಸೂದೆಯನ್ನು ಅಂಗೀಕರಿಸಲಾಗಿದೆ. ಆದಾಗ್ಯೂ ಈ ನಿಯಮವನ್ನು ಪಾಲಿಸುವ ಅಥವಾ ಪಾಲಿಸದೇ ಇರುವ ಅಧಿಕಾರ ರಾಜ್ಯಸರ್ಕಾರಗಳಿಗೆ ಬಿಟ್ಟಿದ್ದು. ಈ ಕ್ರಮ ಶಾಲಾಯಿಂದ ಹೊರಗೆ ಉಳಿಯುವ ಮಕ್ಕಳ ಪ್ರಮಾಣದ ಏರಿಕೆಗೆ ಕಾರಣವಾಗುವುದಿಲ್ಲ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಕರ್ ಹೇಳಿದ್ದಾರೆ.