ಕುಮಟಾ ತಾಲೂಕ ಕಲಭಾಗ ಗ್ರಾಮದ ದೇವಗುಂಡಿಯಲ್ಲಿ ಗ್ರಾಮದ ಜಟಕ ದೇವರ ಬಲಬದಿಗೆ ನಾಗಪ್ರತಿಷ್ಠೆ ಹಾಗೂ ಎಡಬದಿಗೆ ಶ್ರೀ ಮಹಾಸತಿ ದೇವಿಗೆ ದಾಕ್ಷಾಯಣ ಯಾಗ ಅಲ್ಲದೇ ಎಲ್ಲಾ ದೇವರಿಗೆ ಕಲಾಭಿವೃದ್ಧಿ, ಕ್ಷೇತ್ರಶಾಂತಿ, ಭೂತಶಾಂತಿ, ಸಿದ್ಧಯಕ್ಷಿ ಹೋಮ ಮುಂತಾದವುಗಳನ್ನು ಶ್ರೀ ಜಟ್ಟಿ ಮಂಜುನಾಥ ಮಡಿವಾಳ ಇವರ ನೇತೃತ್ವದಲ್ಲಿ ವೇದಮೂರ್ತಿ ಶಂಕರ ಪರಮೇಶ್ವರ ಭಟ್ಟ ಇವರ ಮುಖಂಡತ್ವದಲ್ಲಿ ದಿನಾಂಕ: 28-12-2018 ಮತ್ತು ದಿನಾಂಕ: 29-12-2018 ರಂದು ನಡೆದು ಕಾರ್ಯಕ್ರಮ ಸಂಪನ್ನವಾಯಿತು.
ರಾಮೇಶ್ವರ ಭಟ್ಟ ನವಿಲಗೋಣ, ಸುಬ್ರಾಯ ಭಟ್ಟ ಕೂಜಳ್ಳಿ, ಶ್ರೀಧರ ಭಟ್ಟ ದಿವಳ್ಳಿ, ಶ್ರೀ ನಿಧಿ ಜೋಯಿಷ್ ಕಡ್ಲೆ, ಗಣಪತಿ ಜೋಯಿಷ್ ಹಂದಿಗೋಣ, ಜಟಕ ದೇವರ ಅರ್ಚಕರಾದ ಗಣೇಶ ಭಟ್ಟ ಬಗ್ಗೋಣ, ಸರ್ವೇಶ್ವರ ಸತ್ಯನಾರಾಯಣ ಭಟ್ಟ, ವಿಷ್ಣುಮೂರ್ತಿ ಭಟ್ಟ ಬಗ್ಗೋಣ ಈ ಪ್ರತಿಷ್ಠೆಯ ಕಾರ್ಯಕ್ರಮದಲ್ಲಿ ಸಹಕರಿಸಿದರು. ಅಲ್ಲದೇ ಈ ಸಂದರ್ಭದಲ್ಲಿ ಮಹಾಸತಿ ದೇವರ ಅರ್ಚಕರಾದ ನಾಗೇಶ ಕುಪ್ಪಯ್ಯ ಪಟಗಾರ, ಹನುಮಂತ ರಾಮಕೃಷ್ಣ ಪಟಗಾರ, ಪರಿವಾರ ದೇವತೆಗಳಾದ ಬಬ್ರುಲಿಂಗೇಶ್ವರ ಹಾಗೂ ಭೂತದೇವರ ಅರ್ಚಕರಾದ ಕೃಷ್ಣ ಹೊಸಬಯ್ಯ ಪಟಗಾರ, ವೆಂಕಟ್ರಮಣ ಮಾಸ್ತಿ ಪಟಗಾರ, ಗಣಪಯ್ಯ ತಿಮ್ಮಯ್ಯ ಪಟಗಾರ, ನಾರಾಯಣ ನಾಗಯ್ಯ ಪಟಗಾರ ತಮ್ಮ-ತಮ್ಮ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮತ್ತು ಪ್ರಮುಖರಾದ ಜಿ.ವಿ. ಪಟಗಾರ ಹಂದಿಗೋಣ ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯ ದಿನ ಶಂಕರ ಪರಮೇಶ್ವರ ಭಟ್ಟ ಆಶೀರ್ವಚನ ನೀಡುತ್ತಾ ದೇವರು ಸಂತುಷ್ಟನಾಗಿ ತಮ್ಮ ಬಯಕೆ ಈಡೇರಿಸಬೇಕಾದರೆ ಈ ರೀತಿ ಹೋಮ, ಹವನ ಪೂಜೆಗಳನ್ನು ಮಾಡಬೇಕಾಗುತ್ತದೆ. ದೇವರನ್ನು ನಂಬಿದವರಿಗೆ ಆಸ್ತಿಕರೆಂದು, ನಂಬದೇ ಇದ್ದವರಿಗೆ ನಾಸ್ತಿಕವಾದಿಗಳೆಂದು ಹೇಳುತ್ತಾರೆ. ದೇವರನ್ನು ಮೂರು ವಿಧದಲ್ಲಿ ಕಾಣುತ್ತೇವೆ. 1) ವೇದಾಧ್ಯಯನದಿಂದ, 2) ಶಾಸ್ತ್ರ ಅಧ್ಯಯನದಿಂದ ಹಾಗೂ 3) ಯೋಗದಿಂದ. ಆದರೆ ಜನಸಾಮಾನ್ಯರಿಗೆ ಇದರಿಂದ ಸಾಧ್ಯವಿಲ್ಲ. ಜನಸಾಮಾನ್ಯರು ದೇವರನ್ನು ಕಾಣಬೇಕಾದರೆ ಮೂರ್ತಿ ಪ್ರತಿಷ್ಠೆ ಮಾಡಿ ದೇವರನ್ನು ಆಹ್ವಾನಿಸಿ ಕಾಣುತ್ತೇವೆ. ಹೀಗಾಗಿ ದೇವರನ್ನು ಕಾಣಲು ಮೂರ್ತಿ ಮಧ್ಯವರ್ತಿಯಾಗಿರುತ್ತದೆ. ಆದ್ದರಿಂದ ದೇವಸ್ಥಾನಕ್ಕೆ ಹೋಗಿ ದೇವರ ಮೂರ್ತಿಗೆ ಭಕ್ತಿಯಿಂದ ಕೈಮುಗಿದು ಬೇಡಿಕೆ ಇಟ್ಟು ತಮ್ಮ ಇಷ್ಟಾರ್ಥವನ್ನು ಈಡೇರಿಸಿಕೊಳ್ಳುತ್ತಾರೆ. ಹಿಂದು ಧರ್ಮದಲ್ಲಿ ದೇವರು ಪ್ರತಿಷ್ಠೆ ಮಾಡಿದ ಮೂರ್ತಿವೊಂದರಲ್ಲಿ ಇರುವುದಿಲ್ಲ. ಅವನು ಅನಂತ ವಿಶ್ವವ್ಯಾಪಿ, ಕಲ್ಲು, ಮಣ್ಣು, ನೀರು, ಆಕಾಶ, ಮರ, ಬಳ್ಳಿ ಎಲ್ಲರಲ್ಲೂ ಇರುತ್ತಾನೆಂದು ನಂಬಲಾಗಿದೆ.
ಗಣೇಶ ಭಟ್ಟ ಬಗ್ಗೋಣ ಮಾತನಾಡಿ ಇದೊಂದು ಶಕ್ತಿ ಸ್ಥಳ. ಇಲ್ಲಿ ನೀರಿನ ಸೆಲೆ ಇದ್ದು, ನೀರಿನ ಸೆಲೆಯ ಪಕ್ಕ ಗ್ರಾಮ ದೇವರಿದ್ದು ಈ ಊರಿನ ಜನ ಭಕ್ತಿಯಿಂದ ನಡೆದುಕೊಳ್ಳುತ್ತಾರೆ. 1984ರಲ್ಲಿ ಮಂಜುನಾಥ ಜಟ್ಟಿ ಮಡಿವಾಳರವರು ಜಟಕ ಮಹಾಸತಿ ದೇವರನ್ನು ಅಭಿವೃದ್ಧಿ ಪಡಿಸಿದರು. ವರ್ಷದಲ್ಲಿ ಗಡಿಹಬ್ಬ, ಸಂಕ್ರಾಂತಿ ಪೂಜೆ, ನವರಾತ್ರಿ ಪೂಜೆ, ಕಾರ್ತಿಕ ಪೂಜೆಗಳು ನಡೆಯುತ್ತಾ ಇರುತ್ತದೆ. 1995ರಲ್ಲಿ ಪರಿವಾರ ದೇವತೆಯಾದ ಬಬ್ರುಲಿಂಗೇಶ್ವರ ದೇವ, ಭೂತೇಶ್ವರ ದೇವರನ್ನು ಅರ್ಚಕರು ಹಾಗೂ ಶ್ರೀ ಜಟಕೇಶ್ವರ ಮಹಾಸತಿ ಯುವಕ ಮಂಡಳಿಯವರು ಹಾಗೂ ಊರಿನ ಭಕ್ತರ ಸಹಕಾರದಿಂದ ಗುಡಿ ಇಲ್ಲದ ಈ ದೇವರಿಗೆ ಗುಡಿ ಕಟ್ಟಿ ಗಣಪತಿ ಜೋಯಿಷ್‍ರು ಹಂದಿಗೋಣರವರ ಮುಖಾಂತರ ಪ್ರತಿಷ್ಠಾಪಿಸಿದರು.
ಪ್ರತಿಷ್ಠೆಯ ಕಾರ್ಯಕ್ರಮದ ನಂತರ ರಾತ್ರಿ 10:30ಕ್ಕೆ ಮೋಹನ ನಾಯ್ಕ ಕೂಜಳ್ಳಿ ಹಾಗೂ ಸ್ಥಳೀಯ ಕಲಾವಿದರಿಂದ “ಬ್ರಹ್ಮ ಕಪಾಲ”ವೆಂಬ ಯಕ್ಷಗಾನ ಆಡಿ ಜನರನ್ನು ಮನಸ್ಸನ್ನು ಸೂರೆಗೊಂಡಿರುತ್ತಾರೆ.