ಕುಮಟಾ : ನಿತ್ಯದ ಕಂಪೋರ್ಟ್ ಝೋನ್ ಅಥವಾ ಆರಾಮ ವಲಯದಿಂದ ಹೊರಬರುವಂತಾಗಲು ಕನಸುಗಳು ಬೇಕು. ನಮ್ಮಲ್ಲಾವರಿಸಿರುವ ಜಡತ್ವವನ್ನು ಹೊಡೆದೋಡಿಸುವ ಸಂಕಲ್ಪ ಬೇಕು. ನಾವು ಮಾಡುವ ಸಂಕಲ್ಪಗಳ ಪರಿಕಲ್ಪನೆ ಸರಿಯಾಗಿದ್ದರೆ ಮನಸ್ಸನ್ನು ತಂತಾನೆ ಹತೋಟಿಯಲ್ಲಿಡಬಹುದು. ಇಂದ್ರೀಯ ನಿಗ್ರಹಣೆಯಿಂದ ಮಾತ್ರ ಹೊಸದನ್ನು ಸಾಧಿಸಲು ಸಾಧ್ಯವೆಂದು ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಎನ್.ಆರ್.ಗಜು ತಿಳಿಸಿದರು. ಅವರು ಇಲ್ಲಿಯ ಡಾ.ಎ.ವಿ.ಬಾಳಿಗಾ ಪದವಿ ಪೂರ್ವ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೇಳನದ ಸಂದರ್ಭದಲ್ಲಿ ಉಪಸ್ಥಿತರಿದ್ದು ಒತ್ತಡಮುಕ್ತ ವಾತಾವರಣದಲ್ಲಿ ಕಲಿಕೆ ಸುಗಮವಾಗಬಲ್ಲದೆಂದು ಅಭಿಪ್ರಾಯಪಟ್ಟರು. ಮುಂದುವರಿದು ಮಾತನಾಡುತ್ತಾ ನಮ್ಮ ಮನೆಯಂಗಳದಲ್ಲಿಯೇ ಕಲಿಕೆಯ ಎಲ್ಲ ಅನುಕೂಲಗಳಿದ್ದಾಗಲೂ ಬಹುತೇಕ ಪ್ರತಿಭಾವಂತ ವಿದ್ಯಾರ್ಥಿಗಳು ನೆರೆಯ ಜಿಲ್ಲೆಗಳಿಗೆ ಗುಳೆ ಹೋಗುತ್ತಿರುವುದಕ್ಕೆ ಆತಂಕ ವ್ಯಕ್ತಪಡಿಸಿದರು. ಪುರಾತನ ಮತ್ತು ಪ್ರಸಿದ್ಧ ಬಾಳಿಗಾ ಕಾಲೇಜು ಮೌಲ್ಯಯುತ ಹಾಗೂ ಗುಣಾತ್ಮಕ ಶಿಕ್ಷಣಕ್ಕೆ ಹಿಂದಿನಿಂದಲೂ ಹೆಸರಾಗಿದೆ ಎಂದು ಅಭಿಮಾನ ವ್ಯಕ್ತಪಡಿಸಿದರು.
ಕೆನರಾ ಕಾಲೇಜು ಸೊಸೈಟಿಯ ಕಾರ್ಯಾಧ್ಯಕ್ಷ ಮುರಲೀಧರ ಪ್ರಭು ಕಾರ್ಯಕ್ರಮ ಉದ್ಘಾಟಿಸಿ ಮೊಬೈಲ್ ಮಿತಬಳಕೆ ಬಗ್ಗೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರಲ್ಲದೇ ಆಡಳಿತ ಮಂಡಳಿಯ ಸ್ಪಂದನೆ ಸದಾ ವಿದ್ಯಾರ್ಥಿಗಳ ಹಿತರಕ್ಷಣೆಗೆ ಕಟಿಬದ್ಧವಾಗಿದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯೆ ವೀಣಾ ಕಾಮತ ಕಾಲೇಜು ಮಕ್ಕಳ ಸರ್ವಾಂಗೀಣ ಪ್ರಗತಿಗಾಗಿ ಅಹರ್ನಿಸಿ ಶ್ರಮಿಸುತ್ತದೆ ಮತ್ತು ಸಂಸ್ಕಾರಯುತ ಶಿಕ್ಷಣ ತಮ್ಮಿಂದ ಮುಂದುವರಿದುಕೊಂಡು ಬಂದಿದೆ ಎಂಬ ಮಾತನ್ನು ದೃಢಪಡಿಸಿದರು.
ಯೂನಿಯನ್ ವಿಭಾಗದ ಉಪಾಧ್ಯಕ್ಷ ಗಿರೀಶ ನಾಯ್ಕ ಸ್ವಾಗತಿಸಿ ಪರಿಚಯಿಸಿದರು. ವಿದ್ಯಾರ್ಥಿನಿಯರಾದ ನಿಧಿ ಭಟ್ಟ ಮತ್ತು ನವ್ಯಾ ನಾಯ್ಕ ನಿರೂಪಿಸಿದರು. ಗಣ ತ ಉಪನ್ಯಾಸಕ ನಿರಂಜನ ಗುನಗಾ ವಂದಿಸಿದರು. ಈ ಸಂದರ್ಭದಲ್ಲಿ ಕಾಲೇಜಿಗೆ ಕೀರ್ತಿ ತಂದ ಪ್ರತಿಭಾವಂತರನ್ನು ಸನ್ಮಾನಿಸಲಾಯಿತು. ವಿವಿಧ ಸಾಂಸ್ಕøತಿಕ ಮತ್ತು ಕ್ರೀಡಾಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಜಮಖಾನ ಉಪಾಧ್ಯಕ್ಷ ಮಹಾಬಲೇಶ್ವರ ಅಂಬಿಗ, ಕ್ರೀಡಾ ಕಾರ್ಯದರ್ಶಿ ಹರೀಶ ಮುಕ್ರಿ, ವಾಚನಾಲಯ ಮತ್ತು ಚರ್ಚಾವೇದಿಕೆಯ ಕುಮಾರಿ ದೀಪ್ತಿ ನಾಯ್ಕ, ವರ್ಗ ಪ್ರತಿನಿಧಿಗಳಾದ ತೇಜಸ್ವಿನಿ ಶೆಟ್ಟಿ, ಅಂಕೇಶ ನಾಯ್ಕ, ನಿಮ್ರಾ, ಭರತ ಡಿ.ನಾಯ್ಕ, ಅಂಜಲಿ ಪುಲಿಯೇರಿ, ಗೌತಮ ನಾಯ್ಕ, ನಿಶಾ ಕೊಡಿಯಾ, ಅಭಿನಯ ಗುನಗಾ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.