ಮುಂಬೈ: ಪ್ರೊ ಕಬಡ್ಡಿ ಲೀಗ್(ಪಿಕೆಎಲ್)ನ ಆರನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಬೆಂಗಳೂರು ಬುಲ್ಸ್, ಗುಜರಾತ್ ಫಾರ್ಚೂನ್ ಜಯಂಟ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಇಂದು ಮುಂಬೈನ ಎನ್‌ಎಸ್‌ಸಿಐ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಆರಂಭಿಕ ಆಘಾತ ಎದುರಿಸಿದ ಬೆಂಗಳೂರು, ಗುಜರಾತ್ ವಿರುದ್ಧ 5 ಪಾಯಿಂಟ್‌ಗಳ ರೋಚಕ ಗೆಲುವು ದಾಖಲಿಸಿದೆ.ಬೆಂಗಳೂರು ಬುಲ್ಸ್ 38-33 ಅಂಕಗಳ ಅಂತರದಿಂದ ಗುಜರಾತ್ ತಂಡವನ್ನು ಮಣಿಸಿತು. ಈ ಮೂಲಕ ರೋಹಿತ್ ಕುಮಾರ್ ನೇತೃತ್ವದ ಬೆಂಗಳೂರು ಬುಲ್ಸ್ ಚೊಚ್ಚಲ ಪ್ರಶಸ್ತಿ ಎತ್ತಿಹಿಡಿದು ಸಂಭ್ರಮಿಸಿತು. ಪವನ್ ಕುಮಾರ್ ಶೆರಾವತ್ 22 ಅಂಕ ಕಲೆಹಾಕುವ ಮೂಲಕ ಬುಲ್ಸ್ ಗೆಲುವಿನ ರೂವಾರಿಯಾದರು.
ಚೊಚ್ಚಲ ಪ್ರೊ ಕಬಡ್ಡಿ ಪ್ರಶಸ್ತಿ ಪಡೆದ ಬೆಂಗಳೂರು ತಂಡಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದ್ದು, ಪ್ರಶಸ್ತಿ ವಿತರಣಾ ಸಮಾರಂಭದಲ್ಲೂ ಇದೇ ಮೊದಲ ಬಾರಿ ಪ್ರಶಸ್ತಿ ಪಡೆದ ಬೆಂಗಳೂರು ತಂಡವನ್ನು ಪ್ರಶಂಸಿಸಲಾಯಿತು. ಚಾಂಪಿಯನ್ ಆಗಿರುವ ಬೆಂಗಳೂರು ಬುಲ್ಸ್ 3 ಕೋಟಿ ರು. ಬಹುಮಾನ, ರನ್ನರ್ ಅಪ್ ಗುಜರಾತ್ 1.8 ಕೋಟಿ, 3 ನೇ ಸ್ಥಾನ ಪಡೆದ ಯುಪಿ ಯೋಧಾ 1.20 ಕೋಟಿ ಮತ್ತು 4 ನೇ ಸ್ಥಾನ ಪಡೆದ ದಬಾಂಗ್ ದೆಹಲಿ 80 ಲಕ್ಷ ರು. ಬಹುಮಾನ ಪಡೆಯಿತು.