ಕುಮಟಾ: ತರಗತಿಯ ನಾಲ್ಕು ಕೋಣೆಗಳ ನಡುವೆ ಶಿಕ್ಷಣ ಪಡೆಯುತ್ತಿರುವ ಮಕ್ಕಳಿಗೆ ಗಣಿತದ ಪ್ರಾತ್ಯಕ್ಷಿಕ ಪಾಠವೆಂಬಂತೆ ಮಕ್ಕಳ ಸಂತೆ ಒಂದು ಮಾರುಕಟ್ಟೆ ವೇದಿಕೆಯಾಗಿ ಪರಿಣಮಿಸಿತು. ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ಹೊರಾವರಣದಲ್ಲಿ ಹಮ್ಮಿಕೊಂಡ ಮಕ್ಕಳ ಗ್ರಾಹಕ ಸಂತೆ ಪಾಲಕರನ್ನು, ಹತ್ತಿರದ ಊರಿನವರನ್ನೂ, ನೆರೆಯ ಪ್ರಾಥಮಿಕ ಶಾಲೆಯ ಮಕ್ಕಳನ್ನೂ ಕರೆತರುವಂತೆ ಪ್ರಚೋದಿಸಿತು.
ಸಂತೆಯನ್ನು ಉದ್ಘಾಟಿಸಿ ಮಾತನಾಡಿದ ಪುರಸಭಾ ಸದಸ್ಯೆ ಸುಮತಿ ನಾರಾಯಣಮೂರ್ತಿ ಭಟ್ಟ ‘ಪಂಜಾಬ ಮತ್ತು ಹರಿಯಾಣದಲ್ಲಿ ರೈತರು ಬೆಳೆದ ಬೆಳೆ, ತರಕಾರಿಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವಾಗ ಹುಟ್ಟಿಕೊಂಡ ಸಂತೆ ಎಂಬ ಪರಿಕಲ್ಪನೆ ಇಂದು ಶಾಲಾಮಕ್ಕಳಲ್ಲಿ ಆಟ ಪಾಠಗಳ ನಡುವಿನಲ್ಲೊಂದು ವ್ಯಾವಹಾರಿಕ ನೋಟ ಬೀರುವಲ್ಲಿ ಯಶಸ್ವಿಯಾಗುತ್ತಿದೆ. ಮಕ್ಕಳ ಬೌದ್ಧಿಕ ವಿಕಾಸಕ್ಕೆ ಇದು ಇನ್ನಷ್ಟು ಇಂಬು ನೀಡುತ್ತದೆ’ ಎಂದು ಅಭಿಪ್ರಾಯಪಟ್ಟರು.
ಮಕ್ಕಳಲ್ಲಿ ವ್ಯವಹಾರ ಕುಶಲತೆ, ಸಂವಹನ ಕಲೆ, ಸಾಮಾಜಿಕ ಬದುಕಿನೊಂದಿಗಿನ ಒಡನಾಡದ ಕೌಶಲ್ಯವನ್ನು ಕಲಿಸುವುದರೊಂದಿಗೆ ಅವರಲ್ಲಿನ ಸೃಜನಶೀಲತೆಯನ್ನು ಅನಾವರಣಗೊಳಿಸುವ ಉದ್ದೇಶದಿಂದ ಈ ಚಟುವಟಿಕೆಯನ್ನು ಹಮ್ಮಿಕೊಂಡಿದ್ದೇವೆಂದು ಮುಖ್ಯಾಧ್ಯಾಪಕ ಎನ್.ಆರ್.ಗಜು ತಮ್ಮ ಪ್ರಾಸ್ತಾವಿಕ ಮಾತಿನಲ್ಲಿ ತಿಳಿಸಿದರು. ಅತಿಥಿಗಳಾಗಿ ಮತ್ತು ಶಾಲೆಯ ಸಂತೆಯ ಪರಿಕಲ್ಪನೆಯನ್ನು ವೀಕ್ಷಿಸಿದ ಜಿಲ್ಲಾ ಮುಖ್ಯೋಧ್ಯಾಪಕರ ಸಂಘದ ಉಪಾಧ್ಯಕ್ಷ ದಯಾನಂದ ದೇಶಭಂಡಾರಿ, ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಘಟಕಾಧ್ಯಕ್ಷ ಅನಿಲ್ ರೊಡ್ರಿಗಸ್, ಕಾರ್ಯದರ್ಶಿ ಶಾಂತಪ್ಪಾ ಕೊರವರ್, ಸಹಕಾರ್ಯದರ್ಶಿಗಳಾದ ರಾಮು ಹಿರೇಗುತ್ತಿ, ಆರ್.ಡಿ.ನಾಯ್ಕ, ಉದಯನಾಯ್ಕ ಮೊದಲಾದವರು ಉಪಸ್ಥಿತರಿದ್ದು ಸಂತೆಯ ನಿರ್ವಹಣೆಯನ್ನು ಶ್ಲಾಘಿಸಿದರು.
ತರಗತಿಯೊಳಗೆ ಕಳಾಹೀನರಾಗಿ ಕಂಡುಬರುತ್ತಿದ್ದ ವಿದ್ಯಾರ್ಥಿಗಳು ಸಂತೆಯಲ್ಲಿ ಸಂಭ್ರಮಿಸಿದ ಸಡಗರ ಕಂಡ ಶಿಕ್ಷಕವರ್ಗ ಅಚ್ಚರಿಯಿಂದ ಬೆರಗಾದರು. ಮನೆಯಿಂದ ತಯಾರಿಸಿ ತಂದ, ಹೋಳಿಗೆ, ಗೋಬಿ ಮಂಚೂರಿ, ಪಲ್ಲಾವು, ಪ್ರುಟ್ ಸಲಾಡ್, ಪ್ರುಟ್ ಜ್ಯೂಸ್, ಜಾಮೂನು, ಪಾಯಸ, ಬೇಲ್ಪುರಿ, ವೆಜ್ ಬೋಂಡಾ, ಎಗ್ ಬೋಂಡಾ, ಉದ್ದಿನ ವಡಾ, ಚಿರೂಟಿಯೇ ಮೊದಲಾದ ಹಬ್ಬದ ವಿಶಿಷ್ಠ ಖಾದ್ಯಗಳನ್ನು ಸವಿದು ಸಂತೃಪ್ತಗೊಂಡ ಮಕ್ಕಳು ಲವಲವಿಕೆಯಿಂದ ಓಡಾಡುತ್ತಿದ್ದುದು ಮುದನೀಡುವಂತಿತ್ತು. ಇದೇ ವೇಳೆ ಸಂತೆಯ ಉಪೋತ್ಪನ್ನಗಳ ತ್ಯಾಜ್ಯ ನಿರ್ವಹಣೆಯನ್ನು ಕ್ರಮಬದ್ಧವಾಗಿ ನಿರ್ವಹಿಸಿದರಲ್ಲದೇ, ಶುಚಿತ್ವ ಮತ್ತು ನೈರ್ಮಲ್ಯ ಪರಿಪಾಲನೆಯನ್ನು ಮೈಗೂಡಿಸಿಕೊಳ್ಳಬೇಕಾದ ಪಾಠವನ್ನೂ ಕಲಿತದ್ದು ವಿಶೇಷವಾಗಿತ್ತು. ಪ್ರಾರಂಭದಲ್ಲಿ ಕಿರಣ ಪ್ರಭು ಸ್ವಾಗತಿಸಿದರು. ಶಿಕ್ಷಕ ವಿಷ್ಣು ಭಟ್ಟ ವಂದಿಸಿದರು. ಸುಮಾರು 20 ಕ್ಕೂ ಹೆಚ್ಚು ಮಳಿಗೆಗಳು ವ್ಯವಹರಿಸಿ ಒಟ್ಟಾರೆ ಲಾಭಾಂಶವನ್ನು ಬಂಡವಾಳ ತೊಡಗಿಸಿದ ಮಕ್ಕಳೇ ಹಂಚಿಕೊಳ್ಳುವಲ್ಲಿ ಶಿಕ್ಷಕವೃಂದದವರು ಸಹಕರಿಸಿದರು.