ಕುಮಟಾ: ಇಲ್ಲಿಯ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ವಾರ್ಷಿಕ ಬಹುಮಾನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಿಕ್ಷಣಪ್ರೇಮಿ ಹಾಗೂ ಉದ್ಯಮಿ ಮೋಹನ ನಾಗಪ್ಪ ಶಾನಭಾಗ ಇವರು ಈ ಪ್ರೌಢಶಾಲೆಯಲ್ಲಿ ಓದುವ ಪ್ರತಿಯೊಬ್ಬರಿಗೂ ಸಂಪೂರ್ಣ ಉಚಿತ ಶಿಕ್ಷಣ ಕೊಡುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುವುದು ಎಂಬ ತಮ್ಮ ಇಂಗಿತ ವ್ಯಕ್ತಪಡಿಸಿದರು. ಶಿಕ್ಷಣ ವ್ಯಾಪಾರೀಕರಣಗೊಳ್ಳುತ್ತಿರುವ ಈ ಕಾಲದಲ್ಲಿ ಸಹೃದಯೀ ದಾನಿಗಳ ಸಹಕಾರದೊಂದಿಗೆ ಬಡ ಮತ್ತು ಗ್ರಾಮೀಣ ಭಾಗದ ಮಕ್ಕಳಿಗೆ ಸರಕಾರದ ಯಾವತ್ತೂ ನೆರವಿನೊಂದಿಗೆ ಇತರ ವಿದ್ಯಾಭ್ಯಾಸಕ್ಕೆ ತಗಲುವ ವೆಚ್ಚವನ್ನೂ ಭರಿಸುವ ನಿಟ್ಟಿನಲ್ಲಿ ಆಡಳಿತ ಮಂಡಳಿಯೊಡನೆ ಚರ್ಚಿಸಿ ಕ್ರಮಕೈಗೊಳ್ಳುವ ಯೋಚನೆ ಹೊರಹಾಕಿದರು. ತಮ್ಮ ಇಚ್ಛಿತ ಯೋಜನೆಯನ್ನು ಪ್ರಕಟಿಸಿದರು.
ಅತಿಥಿಗಳಾಗಿ ಆಗಮಿಸಿದ ಜನಪ್ರಿಯ ವೈದ್ಯ ಡಾ.ರವಿರಾಜ ಕಡ್ಲೆ ಮಾತನಾಡುತ್ತಾ ಇಂದಿನ ಶಿಕ್ಷಣ ಪದ್ಧತಿ, ಎಂ.ಎನ್.ಸಿ.ಗಳಲ್ಲಿ ಸೇರಿ ನೌಕರಿಗಿಟ್ಟಿಸುವುದಕಷ್ಟೇ ಸೀಮಿತವಾಗಿದ್ದು ಬ್ರಿಟಿಷ್ ಗುಲಾಮಗಿರಿ ಸಂಸ್ಕøತಿಗೆ ಹೊರತಾಗಿಲ್ಲ ಎಂದು ಅಭಿಪ್ರಾಯಿಸಿದರು. ಜಗತ್ತಿನ ಮೊದಲ ನಾಲ್ಕು ನೂರು ವಿಜ್ಞಾನಿಗಳಲ್ಲಿ ಕೇವಲ ಹದಿನೆಂಟು ಭಾರತೀಯರಿರದಿದ್ದುದು ನಾಚಿಕೆಗೇಡಿನ ವಿಚಾರವೆಂದರು. ಯುದ್ಧ ನೌಕೆ ಯಾಕೆ? ಕೀ ಕೊಡುವ ಗೊಂಬೆ ಕೂಡ ತಯಾರಿಸಲು ನಾವು ಚೀನಾವನ್ನು ನೆಚ್ಚಿಕೊಂಡಿರುವುದು ನಮ್ಮ ದುರ್ದೈವ ಎಂದು ವಿಷಾದಿಸಿದರು. ಭಾಷಾ ಮಾಧ್ಯಮ ಅದೊಂದು ಸಂವಹನಕ್ಕಿರುವ ದುರ್ಬಲ ಬಂಧವಷ್ಟೇ. ಕಲಿಕಾ ಮಾಧ್ಯಮ ಯಾವುದೇ ಆದರೂ ಕಲಿಕೆಗೆ ತೊಡಕಾಗದೆಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಇನ್ನೊಬ್ಬ ಅತಿಥಿ ಮತ್ತು ಶಿಕ್ಷಕ ವೆಂಕಟೇಶ ಪೈ ಮಾತನಾಡುತ್ತಾ ಪಿಯೂಸಿ ಓದಲು ದಕ್ಷಿಣ ದಿಕ್ಕಿಗೆ ಹೋಗುವ ವಿದ್ಯಾರ್ಥಿಗಳನ್ನು ತರಾಟೆಗೆ ತೆಗೆದುಕೊಂಡರು. ಕೇವಲ ಪ್ರಚಾರದಿಂದ ಅಲ್ಲಿ ಶಿಕ್ಷಣ ಜನಪ್ರಿಯಗೊಳಿಸುತ್ತಾರೆಂದು ತಿಳಿಸಿದ ಅವರು ತಮ್ಮ ಮಗ ಓದುತ್ತಿರುವ ಈ ಕನ್ನಡ ಮಾಧ್ಯಮ ಶಾಲೆ ಎಲ್ಲ ಕ್ಷೇತ್ರದಲ್ಲೂ ಉತ್ತಮವಾಗಿದೆ ಎಂದರಲ್ಲದೇ ತಾವು ಮಗನಿಗೆ ಊರಿನಲ್ಲಿಯೇ ಶಿಕ್ಷಣ ಕೊಡಿಸುವುದಾಗಿ ಪ್ರತಿಜ್ಞೆಗೈದರು. ಪಾಲಕ ಪ್ರತಿನಿಧಿಗಳಾಗಿ ಆಗಮಿಸಿದ ಹೊಲನಗದ್ದೆ ಗ್ರಾಮ ಪಂಚಾಯತ ಉಪಾಧ್ಯಕ್ಷೆ ಭಾರತಿ ಶಿವಾನಂದ ಗುಡೇ ಅಂಗಡಿ ಮತ್ತು ಗೃಹಿಣಿ ಗಿರಿಜಾ ಗೌಡ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕೆನರಾ ಎಜುಕೇಶನ್ ಸೊಸೈಟಿ ಸದಸ್ಯ ಕೃಷ್ಣದಾಸ ಪೈ ಶಾಲಾಭಿವೃದ್ಧಿಯ ಎಲ್ಲ ಪ್ರಯತ್ನಗಳನ್ನು ನೆರವೇರಿಸುತ್ತಿರುವುದಾಗಿ ತಿಳಿಸಿದರಲ್ಲದೇ ಮಕ್ಕಳ ಪ್ರತಿಭೆ ಬೆಳಗಲು ಇಲ್ಲಿಯ ಶಿಕ್ಷಕವೃಂದದವರು ನಡೆಸುವ ಪ್ರಯತ್ನ ಶ್ಲಾಘನೀಯವೆಂದರು. ಪ್ರಾರಂಭದಲ್ಲಿ ಸೌಂದರ್ಯ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಮುಖ್ಯ ಶಿಕ್ಷಕ ಎನ್.ಆರ್.ಗಜು ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ವಿ.ಎನ್.ಭಟ್ಟ, ಅನಿಲ್ ರೊಡ್ರಿಗಸ್ ನಿರೂಪಿಸಿದರು. ಶಿಕ್ಷಕರಾದ ಕಿರಣ ಪ್ರಭು, ಸುರೇಶ ಪೈ ಬಹುಮಾನ ಕಾರ್ಯಕ್ರಮ ನಡೆಸಿಕೊಟ್ಟರು. ಇದೇ ಸಂದರ್ಭದಲ್ಲಿ ಸಂಸ್ಥೆಯ ಗಿಬ್ ಪ್ರೌಢಶಾಲೆಯಲ್ಲಿ ಸುದೀರ್ಘ ಅವಧಿಯ ವರೆಗೆ ಸೇವೆ ಸಲ್ಲಿಸಿ ನಿವೃತ್ತರಾದ ಆರ್.ಕೆ.ನಾಯಕ ಮಾಸ್ತರ್ (93) ಅವರ ನಿಧನಕ್ಕೆ ಶ್ರದ್ಧಾಂಜಲಿ ಅರ್ಪಿಸಿ ಒಂದು ನಿಮಿಷದ ಮೌನ ಪ್ರಾರ್ಥನೆ ನಡೆಸಿ ಮುಖ್ಯ ವೇದಿಕೆಯ ಸ್ನೇಹ ಸಮ್ಮೇಳನದ ಕಾರ್ಯಕ್ರಮವನ್ನು ಜ.10 ಕ್ಕೆ ಮುಂದೂಡಲಾಯಿತು.