ಕುಮಟಾ:ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಬೋಟ್ ನಾಪತ್ತೆ ಯಾಗಿದ್ದು ಮೀನುಗಾರರ ಪತ್ತೆ ಕಾರ್ಯ ನಡೆಯುತ್ತಿದ್ದೆ. ಈ ಮಧ್ಯೆ ವೀನುಗಾರಿಕೆ ಬೋಟ್ ನಲ್ಲಿದ್ದ ಕುಮಟಾ ತಾಲೂಕು ಮಾದನಗೆರೆ ಸತೀಶ್ ಈಶ್ವರ ಹರಿಕಂತ್ರ ಮನೆಗೆ ಬುಧವಾರ ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಭೇಟಿ ನೀಡಿ ಕುಟುಂಬದವರಿಗೆ ಧೈರ್ಯತುಂಬಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ವೀನುಗಾರರು ಜೀವಂತವಾಗಿರುತ್ತಾರೆ ಎಂಬ ಅಚಲ ವಿಶ್ವಾಸ ನಮ್ಮ ಸರ್ಕಾರದ್ದು. ಅವರ ಪತ್ತೆಗೆ ಅವಿರತ ಪ್ರಯತ್ನಗಳ ನಡೆದಿದ್ದು ಶೀಘ್ರವೇ ನಿರೀಕ್ಷಿತ ಫಲಶೃತಿಗೆ ಎದುರು ನೋಡುತ್ತಿದ್ದೇವೆ ಎಂದು ಅವರು ಹೇಳಿದರು.
ಡಿಸೆಂಬರ್ 13ರಂದು ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿರುವ ಏಳು ಮೀನುಗಾರರಿದ್ದ ಬೋಟ್ 15ರ ರಾತ್ರಿ ಒಂದು ಗಂಟೆವರೆಗೆ ಸಂಪರ್ಕದಲ್ಲಿದ್ದು ನಂತರ ಸಂಪರ್ಕಕ್ಕೆ ಸಿಗುತ್ತಿಲ್ಲ. ಪ್ರಕರಣ ಸಂಬಂಧ ಡಿ 22ರಂದು ದೂರು ದಾಖಲಿಸಿಕೊಳ್ಳಲಾಗಿದೆ. ಮೀನುಗಾರರ ಪತ್ತೆಗಾಗಿ ನೆರೆ ರಾಜ್ಯಗಳಾದ ಗೋವಾ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳಿಗೂ ಪತ್ರ ಬರೆದು ಮನವಿ ಮಾಡಲಾಗಿದೆ. ಆದರೆ ಈವರೆಗೆ ಯಾವುದೇ ಪ್ರತಿಫಲ ಸಿಕ್ಕಿಲ್ಲ. ರಾಜ್ಯ ಸರ್ಕಾರದಿಂದ ಸ್ಥಳೀಯ ಮೀನುಗಾರರ ಸಹಕಾರ ಪಡೆದು ಎಲ್ಲ ಬಂದರುಗಳೂ ಸೇರಿದಂತೆ ಶಂಕಾಸ್ಪದ ಸ್ಥಳಗಳಲ್ಲಿ ಪತ್ತೆ ಕಾರ್ಯ ನಡೆಸಲಾಗಿದೆ. ಸಮುದ್ರದಲ್ಲೂ ಕೂಡ ಹೆಲಿಕಾಪ್ಟರ್ ಮತ್ತು ತಟ ರಕ್ಷಣಾ ಪಡೆಗಳ ಮೂಲಕ ಪತ್ತೆಗೆ ಪ್ರಯತ್ನಿಸಲಾಗಿದೆ ಎಂದರು. ಮೀನುಗಾರರ ಪತ್ತೆಗೆ ನಿರಂತರ ಪ್ರಯತ್ನಗಳ ನಡೆಯುತ್ತಿವೆ. ಈ ಸಂಬಂಧ ಉಪಗ್ರಹ ಮೂಲಕ ಪತ್ತೆಗೆ ಇಸ್ರೋಗೂ ಮನವಿ ಮಾಡಲಾಗಿದೆ ಎಂದು ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಹೇಳಿದ್ದಾರೆ.
ಗುಜರಾತ್ ಗಡಿದಾಟಿ ಪಾಕಿಸ್ತಾನ ಗಡಿ ಪ್ರವೇಶಿಸು ಸಾಧ್ಯತೆ ಕಡಿಮೆ. ಬೋಟ್ ನಲ್ಲಿ ಅಷ್ಟು ಪ್ರಮಾಣದ ಇಂಧನ ಇರಲಿಲ್ಲ ಎಂದು ಹೇಳಲಾಗಿದೆ. ಈ ಹಿಂದಿನ ಕೆಲವು ಪ್ರಕರಣಗಳ ಆಧಾರದಂತೆ ಬೇರೆ ರಾಜ್ಯದ ಮೀನುಗಾರರು ನಮ್ಮ ಮೀನುಗಾರರನ್ನು ಅಪಹರಿಸಿರುವ ಸಂಶಯ ಇದೆ. ಈ ವಿಚಾರದಲ್ಲೂ ನೆರೆ ರಾಜ್ಯಗಳ ಸರ್ಕಾರದೊಂದಿಗೆ ನಿರಂತರ ಸಂಪರ್ಕ ಮಾಡಲಾಡಲಾಗುತ್ತಿದೆ ಎಂದು ಸಚಿವರು ಹೇಳಿದರು.
ಸ್ಥಳೀಯ ಶಾಸಕ ದಿನಕರ ಶೆಟ್ಟಿ, ಮಾಜಿ ಶಾಸಕಿ ಶಾರದಾ ಶೆಟ್ಟಿ, ಜಿಲ್ಲಾಧಿಕಾರಿ ಎಸ್. ಎಸ್. ನಕುಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ್ ಎಸ್ ಪಾಟೀಲ್ ಸೇರಿದಂತೆ ವಿವಿಧ ಪ್ರಮುಖರು ಈ ಸಂದರ್ಭದಲ್ಲಿದ್ದರು.