ಶಿರಸಿ : ಬಾಲಕನಿಗೆ ಬೆದರಿಸಿರುವ ಘಟನೆಗೆ ಸಂಬಂಧಿಸಿ ಶಿರಸಿ ಮಾರಿಕಾಂಬಾ ದೇವಾಲಯದ ಆಡಳಿತ ಮಂಡಳಿಯಿಂದ ಅಂತೂ ಸ್ಪಷ್ಟೀಕರಣವೊಂದು ಹೊರ ಬಿದ್ದಿದ್ದು ಅವರು ನೀಡಿದ ಪತ್ರಿಕಾ ಪ್ರಕಟಣೆಯ ಯಥಾಪ್ರತಿ ಇಂತಿದೆ.
ನಿನ್ನೆ ಮತ್ತು ಇಂದು ಕೆಲ ಪತ್ರಿಕೆ ಹಾಗೂ ಸಾಮಾಜಿಕ ಜಾಲ ತಾಣಗಳಲ್ಲಿ ವಿದ್ಯಾರ್ಥಿಯೊಬ್ಬನಿಗೆ ದೇವಸ್ಥಾನದ ಸಿಬ್ಬಂದಿಯವರು ಬೆದರಿಸಿರುವ ಘಟನೆಯ 0ಕುರಿತು ನಿಜವಾದ ಸಂಗತಿಯನ್ನು ವಿಕೃತಗೊಳಿಸಿ ಸತ್ಯಕ್ಕೆ ದೂರವಾದ ಸಂಗತಿಯನ್ನು ಪ್ರಚಾರ ಮಾಡುವ ಮೂಲಕ ಶ್ರೀ ಮಾರಿಕಾಂಬಾ ದೇವಸ್ಥಾನದ ಆಡಳಿತ ಹಾಗೂ ಘನತೆಗೆ ಧಕ್ಕೆ ತರುವಂತಹ ಕೃತ್ಯಗಳು ನಡೆಯುತ್ತಿರುವುದು ಧರ್ಮದರ್ಶಿ ಮಂಡಳದ ಗಮನಕ್ಕೆ ಬಂದಿರುತ್ತದೆ. ಅಲ್ಲದೆ ವಾಸ್ತವ ಅಂಶಗಳನ್ನು ತಿಳಿಯದೇ ಅನಾವಶ್ಯಕವಾದ ಗೊಂದಲ ಸೃಷ್ಠಿಸುವ, ದೇವಸ್ಥಾನದ ಕುರಿತು ಸಾರ್ವಜನಿಕ ವಲಯದಲ್ಲಿ ತಪ್ಪು ತಿಳುವಳಿಕೆಗೆ ಅವಕಾಶಮಾಡಿ ಆಡಳಿತ ವ್ಯವಸ್ಥೆಯ ಕುರಿತು ಸಾರ್ವಜನಿಕರ ದಿಕ್ಕು ತಪ್ಪಿಸುವ ಕಾರ್ಯ ನಡೆಯುತ್ತಿರುವುದು ಗಮನಕ್ಕೆ ಬಂದಿರುತ್ತದೆ. ಈ ಹಿನ್ನೆಲೆಯಲ್ಲಿ ಧರ್ಮದರ್ಶಿ ಮಂಡಳಿಯು ಈ ಸಾರ್ವಜನಿಕ ಸ್ಪಷ್ಠನೆಯನ್ನು ನೀಡುತ್ತಿದೆ.
ಒಂದು ವಾರದ ಹಿಂದೆ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಯೋರ್ವ ದೇವಸ್ಥಾನದಲ್ಲಿ ಇಟ್ಟಿದ್ದ ಗಿಡಗಳಿಂದ ಹೂ ಕೀಳಬಾರದೆಂದು ತಿಳಿಸಿದಾಗಲೂ ಹೂಗಳನ್ನು ಕಿತ್ತಿದ್ದರಿಂದ ಆ ಸಂದಂರ್ಭದಲ್ಲಿ ಸೇವೆಯಲ್ಲಿದ್ದ ದೇವಸ್ಥಾನದ ಸಿಬ್ಬಂದಿಯು ಆ ಬಾಲಕನ್ನು ಕರೆದು ಕಛೇರಿಯಲ್ಲಿ ಕೂಡ್ರಿಸಿ ತಿಳುವಳಿಕೆಯ ಬೆದರಿಕೆಯನ್ನು ಹಾಕಿದ್ದು ಇರುತ್ತದೆ. ನಂತರ ಆ ಬಾಲಕನನ್ನು ಸಮಾಧಾನಗೊಳಿಸಿ ಪ್ರೀತಿ ಪೂರ್ವಕವಾಗಿ ಕಳುಹಿಸಲಾಗಿರುತ್ತದೆ. ಆದರೆ ಬೈದಿರುವ ಅಂಶಗಳನ್ನóಷ್ಟೇ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಈ ಘಟನೆ ನಡೆದು ಒಂದು ವಾರವೇ ಗತಿಸಿದೆ. ಈ ಘಟನೆ ನಡೆದ ತಕ್ಷಣೆದಲ್ಲಿಯೇ ಗಮನಿಸಿದ ಆಡಳಿತ ಮಂಡಳಿಯು ಸದರಿ ಸಿಬ್ಬಂದಿಯನ್ನು ವಿಚಾರಣೆ ನಡೆಸಿ ಇನ್ನು ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಲು ಎಚ್ಚರಿಕೆಯನ್ನು ನೀಡಲಾಗಿದೆ. ಅಲ್ಲದೇ ಇತರ ಸಿಬ್ಬಂದಿಗಳಿಗೂ ಕೂಡ ದೇವಸ್ಥಾನಕ್ಕೆ ಬರುವ ಸದ್ಭಕ್ತರೊಂದಿಗೆ ಉತ್ತಮವಾಗಿ ನಡೆದುಕೊಳ್ಳಲು ಸೂಚಿಸಿ ಎಚ್ಚರಿಕೆಯನ್ನು ನೀಡಲಾಗಿರುತ್ತದೆ. ಅಲ್ಲದೇ ದೇವಸ್ಥಾನದ ವ್ಯಾಪ್ತಿಯಲ್ಲಿ ಈ ತರಹದ ಘಟನೆಗಳು ನಡೆಯದಂತೆ ನಿಗಾ ವಹಿಸಲು ಸೂಕ್ತ ವ್ಯವಸ್ಥೆಯನ್ನು ಜಾರಿಗೆ ತರಲು ಕ್ರಮ ಕೈಗೊಳ್ಳಲಾಗಿರುತ್ತದೆ. ಆದರೆ ಈ ವಿಷಯವನ್ನು ಗಂಭೀರಗೊಳಿಸುವ, ದೇವಸ್ಥಾನದ ಆಡಳಿತ ವ್ಯವಸ್ಥೆಗೆ ಮುಜುಗರ ತರುವ ಉದ್ದೇಶದಿಂದ ಯಾರೋ ಕಿಡಿಗೇಡಿಗಳು ಈ ಸಂದರ್ಭವನ್ನು ತಿರುಚಿ ಈ ರೀತಿಯ ವಾತಾವರಣವನ್ನು ಸೃಷ್ಠಿಸಿರುತ್ತಾರೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ವಿನಂತಿ ಏನೆಂದರೆ, ಶ್ರೀ ದೇವಸ್ಥಾನವು ದಕ್ಷಿಣ ಭಾರತದ ಪ್ರಸಿದ್ಧ ಕ್ಷೇತ್ರವಾಗಿದ್ದು ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ದೇವಸ್ಥಾನಕ್ಕೆ ಭೇಟಿ ಕೊಡುತ್ತಾರೆ. ಈ ಸಂದರ್ಭದಲ್ಲಿ ಬಂದಂತಹ ಭಕ್ತಾಧಿಗಳು ದೇವಸ್ಥಾನದ ನಿಯಮ ಹಾಗೂ ರೂಢಿಗಳನ್ನು ಉಲ್ಲಂಘಿಸುವುದು, ವ್ಯವಸ್ಥೆಯನ್ನು ವಿರೂಪಗೊಳಿಸುವುದು ಅಥವಾ ವ್ಯವಸ್ಥೆಗೆ ಧಕ್ಕೆ ತರುವುದು ದೇವಸ್ಥಾನದ ಸುವ್ಯವಸ್ಥೆಯ ಉದ್ದೇಶದಿಂದ ಸರಿಯಾದ ಕ್ರಮವಲ್ಲ. ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಹಾಗೂ ಸಂಬಂಧಪಟ್ಟ ಎಲ್ಲರನ್ನು ಪ್ರೀತಿ / ಗೌರವದಿಂದಲೇ ಕಾಣಲಾಗುತ್ತದೆ. ಯಾವುದೇ ಕಾರಣಕ್ಕೂ ಕೂಡ ದೌರ್ಜನ್ಯ ಹಾಗೂ ಹಿಂಸಾ ಕೃತ್ಯದಲ್ಲಿ ದೇವಸ್ಥಾನದ ಯಾವ ಸಿಬ್ಬಂದಿಗಳೂ ತೊಡಗುವುದಿಲ್ಲ. ಕಾರಣ ಬುದ್ಧಿಪೂರ್ವವಾಗಿ ಹೆದರಿಸಿದ ಘಟನೆಯನ್ನು ವಿರೂಪಗೊಳಿಸಿ, ತಿರುಚಿ ಪ್ರಚಾರ ಮಾಡಬಾರದಾಗಿ ವಿನಂತಿಸುತ್ತಿದ್ದೇವೆ. ಅಲ್ಲದೇ ಶ್ರೀ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಅವಶ್ಯವಿರುವ ಪೂರಕ ಸೌಲಭ್ಯವನ್ನು ಒದಗಿಸುವ ಕಾರ್ಯಕ್ಕೆ ಕೈ ಜೋಡಿಸುವಂತೆ ಕೋರುತ್ತೇವೆ.
ಶ್ರೀ ದೇವಸ್ಥಾನದ ಕುರಿತು ಸ್ಪಷ್ಟ ಮಾಹಿತಿ ಇರುವ ಹಾಗೂ ಶ್ರೀ ದೇವಿಯ ಕುರಿತು ನಂಬಿಗೆಯಿರುವ, ಕಳಕಳಿ ಇರುವ, ಗೌರವವಿರುವ ಮತ್ತು ವಾಸ್ತವಾಂಶವನ್ನು ಸಂಪೂರ್ಣವಾಗಿ ತಿಳಿದಿರುವ ಯಾವುದೇ ವ್ಯಕ್ತಿಗಳು ಶ್ರೀ ದೇವಸ್ಥಾನದ ಕುರಿತು ಉಹಾಪೋಹ ಹಾಗೂ ಗೊಂದಲಕ್ಕೆ ಕಾರಣವಾಗುವ ಕಾರ್ಯಕ್ಕೆ ತೊಡಗುವುದಿಲ್ಲವೆಂದು ಧರ್ಮದರ್ಶಿ ಮಂಡಳಿಯು ಭಾವಿಸುತ್ತದೆ. ಹಾಗೂ ಈ ವಾಸ್ತವಾಂಶವನ್ನು ತಮ್ಮ ಮಾಧ್ಯಮದ ಮೂಲಕ ಶ್ರೀದೇವಿಯ ಎಲ್ಲ ಸದ್ಭಕ್ತರು ಮತ್ತು ಸಾರ್ವಜನಿಕರ ಗಮನಕ್ಕೆ ತರಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇವೆ.
ವಂದನೆಗಳೊಂದಿಗೆ
ಶ್ರೀ ಮಾರಿಕಾಂಬಾ ದೇವಸ್ಥಾನದ ಧರ್ಮದರ್ಶಿ ಮಂಡಳಿಯ ಪರವಾಗಿ –
ಅಧ್ಯಕ್ಷರು,ಧರ್ಮದರ್ಶಿ ಮಂಡಳಿ,
ಶ್ರೀ ಮಾರಿಕಾಂಬಾ ದೇವಸ್ಥಾನ, ಶಿರಸಿ.