ಕುಮಟಾ : ಉತ್ತರಕನ್ನಡದಲ್ಲಿ ಕಿರುಚಿತ್ರ ವೀಕ್ಷಕರ ಕ್ಲಬ್ ಮಾಡಬೇಕು ಹಾಗೂ ಕಿರುಚಿತ್ರಗಳು ಟ್ರೆಂಡ್ ಆಗುತ್ತಿರುವುದರಿಂದ ಉತ್ತರಕನ್ನಡ ಜಿಲ್ಲೆಯ ಪ್ರತಿಭೆಗಳನ್ನು ಈ ಮೂಲಕ ನಾವು ದೊಡ್ಡ ಮಟ್ಟಕ್ಕೆ ಬೆಳೆಸಬಹುದು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾದ ಅರವಿಂದ ಕರ್ಕಿಕೊಡಿ ಹೇಳಿದರು.
ಅವರು ಕುಮಟಾ ವೈಭವ ಪ್ಯಾಲೇಸ್‍ನಲ್ಲಿ ನಡೆದ ವಿನಾಯಕ ಬ್ರಹ್ಮೂರು ನಿರ್ದೇಶನದ ಪ್ರೌಢಶಾಲೆ ಚಿತ್ರದ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಉತ್ತರಕನ್ನಡ ಜಿಲ್ಲೆಯಲ್ಲಿಯೂ ಇಂತಹ ಸಿನಿಮಾಗಳು ನಿರ್ಮಾಣವಾಗುತ್ತಿರುವುದು ಹೆಮ್ಮೆ ಪಡುವಂತಹ ವಿಷಯವಾಗಿದ್ದು ವಿನಾಯಕ ಬ್ರಹ್ಮೂರು ಅವರಂತೆ ಹಲವು ನಿರ್ದೇಶಕರುಗಳು ನಮ್ಮಲ್ಲಿ ಹುಟ್ಟಬೇಕು. ಶಂಕರನಾಗ್, ಅನಂತ್‍ನಾಗ್‍ರಂತಹ ಶ್ರೇಷ್ಠ ನಟರನ್ನು ನೀಡಿದ ನಮ್ಮ ಜಿಲ್ಲೆಯಿಂದ ಈಗ ಮತ್ತೊಂದು ಪ್ರತಿಭೆ ಬೆಳಗುತ್ತಿದೆ. ಅವರಿಗೆ ನಮ್ಮಿಂದಾಗುವ ಸಹಾಯ ಮಾಡಬೇಕು, ಚಿತ್ರರಂಗದಲ್ಲಿ ಛಾಪು ಮೂಡಿಸಲು ಸಹಕಾರ, ಪ್ರೋತ್ಸಾಹದ ಅವಶ್ಯಕತೆಯಿದೆ ಎಂದರು. ವಿನಾಯಕ ಬ್ರಹ್ಮೂರು ಅವರ ಈ ಹಿಂದಿನ ಎಲ್ಲಾ ಚಿತ್ರಗಳನ್ನು ನಾನು ನೋಡಿದ್ದು ಕಾನ್ಸೆಪ್ಟ್‍ಗಳನ್ನು ಅವರು ನಿರೂಪಿಸುವ ರೀತಿ ಅದ್ಭುತ. ಎಲ್ಲಾ ಚಿತ್ರಗಳಲ್ಲಿಯೂ ಅವರ ನಿರ್ದೇಶನವೇ ಪ್ರಮುಖ ಪಾತ್ರ ವಹಿಸಿದೆ ಎಂದು ಶ್ಲಾಘಿಸಿದರು. ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪ್ರೌಢಶಾಲೆ ಚಿತ್ರವನ್ನ ಎಲ್ಲೆಡೆ ಪ್ರದರ್ಶನಗಳನ್ನಿಡಲು ತೀರ್ಮಾನಿಸಿದ್ದೇವೆ ಎಂದು ಭರವಸೆ ನೀಡಿದ ಅವರು ವಾಟ್ಸಾಪ್‍ಗಳಲ್ಲಿ ಕಿರುಚಿತ್ರ ವೀಕ್ಷಕರ ಕ್ಲಬ್‍ಗಳನ್ನ ಕ್ರಿಯೇಟ್ ಮಾಡಿ ಪ್ರತಿಯೊಂದು ಚಿತ್ರದ ಪ್ರಮೋಶನ್‍ಗೆ ಅನುಕೂಲವಾಗುವಂತೆ ಮಾಡುವುದರ ಜೊತೆ ಜಿಲ್ಲೆಯ ಪ್ರತಿಭೆಗಳಿಗೆ ಒಂದೊಳ್ಳೆಯ ವೇದಿಕೆಯೂ ಸೃಷ್ಟಿಯಾದಂತಾಗುತ್ತದೆ ಎಂದರು. ಕುಮಟಾ ವೈಭವದಲ್ಲಿ ಚಿತ್ರೋತ್ಸವವನ್ನು ಮೊದಲ ಬಾರಿ ಆಯೋಜಿಸಿದ್ದರಾದರೂ ಕುಮಟಾ ವೈಭವಕ್ಕೆ ನೀಡಿದ ಪ್ರಚಾರವನ್ನು ಚಿತ್ರೋತ್ಸವದಂತಹ ಒಳ್ಳೆಯ ಕಾರ್ಯಕ್ರಮಕ್ಕೆ ನೀಡಲಿಲ್ಲ. ಹಾಗಾಗಿ ಅದು ವಿಫಲವಾಯಿತು. ಕಲೆಗೆ ಸಿಗಬೇಕಾದ ಬೆಲೆ ಸೂಕ್ತ ರೀತಿಯಲ್ಲಿ ಸಿಗಲಿಲ್ಲ. ಇದು ವಿಷಾದದ ಸಂಗತಿ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪತ್ರಕರ್ತ ರಾಘವೇಂದ್ರ ಬೆಟ್ಟಕೊಪ್ಪ ಮಾತನಾಡಿ ಉತ್ತರಕನ್ನಡ ಜಿಲ್ಲೆಯ ಸೊಬಗನ್ನು ಹಾಗೂ ಪ್ರವಾಸಿ ತಾಣವನ್ನು ಅಭಿವೃದ್ಧಿ ಹೊಂದುವ ರೀತಿಯಲ್ಲಿ ಚಿತ್ರಗಳನ್ನು ನಿರ್ಮಿಸಬೇಕಾದ ಅನಿವಾರ್ಯತೆ ಇದೆ, ಇದರಿಂದ ನಮ್ಮ ಜಿಲ್ಲೆಯ ಎಷ್ಟೋ ಸುಂದರ ಸ್ಥಳಗಳು ಪ್ರವಾಸಿಗರ ಗಮನ ಸೆಳೆಯಲು ಸಾಧ್ಯ. ಆದರೆ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಚಿತ್ರೀಕರಣ ನಡೆಸಬೇಕು ಎಂದು ಕಿವಿಮಾತು ಹೇಳಿದರು. ದೊಡ್ಡ ತಾರಾಗಣದೊಂದಿಗೆ ಪ್ರೌಢಶಾಲೆಯಂತಹ ಚಿತ್ರವನ್ನು ಜಿಲ್ಲೆಯಲ್ಲಿ ನಿರ್ಮಿಸಿರುವುದು ಸಂತಸದಾಯಕ ವಿಚಾರವಾಗಿದ್ದು ಚಿತ್ರವು ಎಲ್ಲರನ್ನ ತಲುಪಲಿ ಎಂದು ಶುಭ ಹಾರೈಸಿದರು.

RELATED ARTICLES  ಸಾರ್ವಜನಿಕ ಸ್ಥಳದಲ್ಲಿ ಅಗ್ನಿ ಅವಘಡ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ರಾಧಾಕೃಷ್ಣ ಭಟ್ಟ ಮಾತನಾಡಿ ವಿನಾಯಕ ಬ್ರಹ್ಮೂರು ಅವರ ಚಿತ್ರಗಳು ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುತ್ತಲೇ ಬಂದಿದೆ. ಪ್ರೌಢಶಾಲೆಯ ಮೂಲಕ ಮತ್ತೊಂದು ಹೆಜ್ಜೆಯನ್ನಿಟ್ಟಿದ್ದು ಮುಂದೊಮ್ಮೆ ಚಿತ್ರರಂಗದಲ್ಲಿ ಉತ್ತಮ ನಿರ್ದೇಶಕರನ್ನಾಗಿ ಅವರನ್ನ ನೋಡಬೇಕಾಗಿದೆ ಎಂದರು. ಇನ್ನೋರ್ವ ಅತಿಥಿ ಜಯದೇವ ಬಳಗಂಡಿ ಮಾತನಾಡಿ ವಿನಾಯಕ ಬ್ರಹ್ಮೂರು ಅವರು ಜಿಲ್ಲೆಯಲ್ಲಿ ಎಷ್ಟೋ ಪ್ರತಿಭಾವಂತರನ್ನು ಹುಟ್ಟು ಹಾಕಿದ ಫ್ಯಾಕ್ಟರಿಯಾಗಿದ್ದು ಪ್ರೌಢಶಾಲೆ ಜನಪ್ರಿಯಗೊಳ್ಳಲಿ ಎಂದು ಶುಭ ಕೋರಿದರು. ಚಿತ್ರ ನಿರ್ದೇಶಕ ವಿನಾಯಕ ಬ್ರಹ್ಮೂರು ಪ್ರಾಸ್ತವಿಕ ನುಡಿಗಳನ್ನಾಡಿ ಚಿತ್ರೀಕರಣದ ಅನುಭವಗಳನ್ನ ಹಂಚಿಕೊಂಡರು. ಹಾಗೆಯೇ ನಾನಿಲ್ಲಿ ಅಡುಗೆ ಭಟ್ಟನಾಗಿದ್ದು ನನ್ನ ಅಡುಗೆ ರುಚಿ ಚೆನ್ನಾಗಿದ್ದರೆ ಸವಿಯಿರಿ, ತಪ್ಪಿದ್ದಲ್ಲಿ ಸಲಹೆ ನೀಡಿ ಎಂದರು.

RELATED ARTICLES  ಗೋಡೆ ನಾರಾಯಣ ಹೆಗಡೆ ಅವರಿಗೆ ಅನಂತಶ್ರೀ ಪ್ರಶಸ್ತಿ ಪ್ರದಾನ


ಕಾರ್ಯಕ್ರಮದಲ್ಲಿ ರವಿರಾಜ ಸ್ಪೋಟ್ರ್ಸ್ ಕ್ಲಬ್‍ನ ಅಧ್ಯಕ್ಷ ರಾಘವೇಂದ್ರ ನಾಯಕ,ಪೂರ್ಣಿಮಾ ಅಬ್ಬೆಮನೆ ,ರಾಜೇಶ ಆಚಾರ್ಯ ಚಂದಾವರ ಹಾಗೂ ಚಿತ್ರತಂಡದವರು ಉಪಸ್ಥಿತರಿದ್ದರು. ಯೋಗೀಶ್ ನಾಯ್ಕ ಕಾರ್ಯಕ್ರಮವನ್ನು ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಮೊದಲ ಶೋ ಪ್ರದರ್ಶನಗೊಂಡು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

Capture