ಕುಮಟಾ: ಮಕ್ಕಳನ್ನು ಅಂಕಗಳ ಬೇಟೆಗಾಗಿ ಸಿದ್ದಗೊಳಿಸುವ ಬದಲು ಕನ್ನಡದ ಮೂಲಕ ಅವರೊಳಗಿನ ಸೃಜನಶೀಲತೆಯನ್ನು ಹಸಿಹಸಿಯಾಗಿ ಉಳಿಸಿಕೊಂಡು ನಾಳಿನ ಭಾರತಕ್ಕಾಗಿ ಸಜ್ಜುಗೊಳಿಸುವುದು ತುರ್ತಾಗಿ ಆಗಬೇಕಾದ ಕೆಲಸ ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಅವರು ಅಭಿಪ್ರಾಯಪಟ್ಟರು.


ಅವರು ತಾಲೂಕಿನ ಮಿರ್ಜಾನ್ ಗ್ರಾಮದ ಬಿಜಿಎಸ್ ಕೇಂದ್ರೀಯ ವಿದ್ಯಾಲಯವು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಹಮ್ಮಿಕೊಂಡ ಜಿಲ್ಲಾ ಮಟ್ಟದ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಇಂಗ್ಲಿಷ್ ಮಾಧ್ಯಮದ ಇಂಥ ಶಾಲೆಯಲ್ಲೂ ಹಚ್ಚೇವು ಕನ್ನಡದ ದೀಪ ಎಂದು ಹಾಡುವ ಪರಿ ಮತ್ತು ಮಕ್ಕಳ ಸಾಹಿತ್ಯ ಸಮ್ಮೇಳನ ನಡೆಸುವ ಸಡಗರ ಸಹಜವಾಗಿಯೇ ಕನ್ನಡ ಭಾಷೆಯ ಬಗ್ಗೆ ಭರವಸೆ ಹೆಚ್ಚಿಸುತ್ತಿದೆ. ಮಕ್ಕಳನ್ನು ಕನ್ನಡದ ಮಕ್ಕಳನ್ನಾಗಿ ರೂಪಿಸುವುದು ಪಾಲಕ ಮತ್ತು ಶಿಕ್ಷಕರ ಮನೋಭಾವವನ್ನವಲಂಬಿಸುತ್ತದೆ. ಪ್ರತಿ ಶಾಲೆಗಳಲ್ಲೂ ಕನ್ನಡ ಸಂಘ, ಸಮ್ಮೇಳನಗಳನ್ನು ಹಮ್ಮಿಕೊಂಡರೆ ಮಕ್ಕಳಲ್ಲೂ ಕನ್ನಡದ ಸಾಧ್ಯತೆಯ ಬಗ್ಗೆ ಅಭಿಮಾನ ಮತ್ತು ವಿಶ್ವಾಸ ಹೆಚ್ಚುತ್ತದೆ ಎಂದು ಅರವಿಂದ ಕರ್ಕಿಕೋಡಿ ನುಡಿದರು.

RELATED ARTICLES  ಜಿಲ್ಲಾ ಮಟ್ಟದ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಗೆದ್ದ ಸಿವಿಎಸ್‌ಕೆ ವಿದ್ಯಾರ್ಥಿಗಳು


ವಿದ್ಯಾಸಂಸ್ಥೆಗಳು ನಡೆಸುವ ಇಂಥ ಮಕ್ಕಳ ಸಾಹಿತ್ಯ ಸಮ್ಮೇಳನಗಳ ಬಗ್ಗೆ ಶಿಕ್ಷಣ ಇಲಾಖೆ ಹೆಚ್ಚಿನ ಸಹಕಾರ ಕೊಡಬೇಕು. ಇಲಾಖೆಯ ಅಧಿಕಾರಿಗಳು ಮಕ್ಕಳ ಸಾಹಿತ್ಯ ಸಮ್ಮೇಳನಗಳ ಬಗ್ಗೆ ಉದಾಸೀನ ತೋರುವುದು ಸರಿಯಲ್ಲ. ಕನ್ನಡ ಮತ್ತು ಸಾಹಿತ್ಯ ಸಮ್ಮೇಳನಗಳ ಬಗ್ಗೆ ಹೆಚ್ಚಿನ ಕಾಳಜಿ ತೋರುವುದು ಅಧಿಕಾರಿಗಳ ಜವಾಬ್ದಾರಿ ಎಂಬದನ್ನು ಅವರು ಅರಿತುಕೊಳ್ಳಬೇಕು ಎಂದು ಅರವಿಮದ ಕರ್ಕಿಕೋಡಿ ಹೇಳಿದರು.


ತಾಲೂಕು ಕ.ಸಾ.ಪ. ಅಧ್ಯಕ್ಷ ಡಾ. ಶ್ರೀಧರ ಗೌಡ ಅವರು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ರಾಜ್ಯ ಮಟ್ಟದಲ್ಲೂ ಮಕ್ಕಳ ಸಾಹಿತ್ಯ ಸಮ್ಮೇಳನ ನಡೆಸಿದರೆ ಮಕ್ಕಳಲ್ಲಿ ಕನ್ನಡದ ಬಗ್ಗೆ ಹೆಚ್ಚಿನ ಬದ್ದತೆ ಮೂಡಲು ಸಾಧ್ಯ. ತಾವು ಶಿಕ್ಷಕರಾಗಿ ಕೆಲಸ ಮಾಡುವ ಶಾಲೆಗಳಲ್ಲಿ ಇಲಾಖೆಯ ಶಿಕ್ಷಕರು ಮತ್ತು ಅಧಿಕಾರಿಗಳ ಸಹಕಾರದೊಂದಿಗೆ ತಾಲೂಕಾ ಮಟ್ಟದ ಸಾಹಿತ್ಯ ಸಮ್ಮೇಳನಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ಇದೊಂದು ಸಣ್ಣ ಪ್ರಯತ್ನ ಅಷ್ಟೆ ಎಂದು ಹೇಳಿದರು.


ಸರ್ವಾಧ್ಯಕ್ಷತೆ ವಹಿಸಿದ ಬಿಜಿಎಸ್. ಶಾಲೆಯ ವಿದ್ಯಾರ್ಥಿನಿ ತೇಜಾ ಜಗನ್ನಾಥ ನಾಯ್ಕ ತನಗೆ ಈ ಅವಕಾಶ ಸಿಕ್ಕಿರುವುದು ಖುಷಿ ಕೊಟ್ಟಿದೆ. ತನಗೆ ತನ್ನ ತಂದೆ ರೂಢಿಸಿಕೊಂಡ ಜಾನಪದ ಹಾಡು ಮತ್ತು ಕಲೆ ತುಂಬ ಆಕರ್ಷಿಸಿದೆ. ಜೊತೆಗೆ ತಾನು ಯಕ್ಷಗಾನ ಕಲೆಯನ್ನು ಅಭ್ಯಸಿಸುತ್ತಿರುವುದರಿಂದ ಹಾಗೂ ಸಾಹಿತ್ಯ ಪರಿಷತ್ತು ಜಿಲ್ಲಾ ಮತ್ತು ತಾಲೂಕಾ ಸಮ್ಮೇಳನಗಳಲ್ಲಿ ಅವಕಾಶ ಕೊಟ್ಟಿರುವುದರಿಂದ ತನಗೆ ಕವನ, ಲೇಖನ ಬರೆಯಲು ಹೆಚ್ಚಿನ ಪ್ರೇರಣೆ ಆಯಿತು ಎಂದಳು..
ದಿವ್ಯ ಸಾನಿಧ್ಯ ವಹಿಸಿದ ಆದಿ ಚುಂಚನಗಿರಿ ಮಜಾ ಸಂಸ್ಥಾನ ಮಠದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಅವರು ಬಿಜಿಎಸ್ ಆಂಗ್ಲ ಮಾಧ್ಯಮ ಶಾಲೆಯಾದರೂ ನಮ್ಮೆಲ್ಲರ ತಾಯಿ ಕನ್ನಡಾಂಬೆಯನ್ನು ಮರೆತಿಲ್ಲ. ಅದಕ್ಕೇ ಇಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನದಂತಹ ಮಹತ್ವದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದರು.
ಕವಿ ಬೀರಣ್ಣ ನಾಯಕ ಅವರು ಸರಕಾರಿ ಕನ್ನಡ ಶಾಲೆಗಳು ಮುಚ್ಚುತ್ತಿರುವುದು ಆತಂಕದ ವಿಷಯ ಎಂದರು.

RELATED ARTICLES  ಭಾರತ ಸೇವಕ ಸಮಾಜದಿಂದ ಮಹಿಳಾ ದಿನಾಚರಣೆ: ಆಶಾ ನಾಯ್ಕರಿಗೆ ಸನ್ಮಾನ


ಕೊಂಕಣ ವಿದ್ಯಾಸಂಸ್ಥೆಯ ಶಿಕ್ಷಕ ಚಿದಾನಂದ ಭಂಡಾರಿ ತೀರ್ಪುಗಾರರಾಗಿ ಪಾಲ್ಗೊಂಡಿದ್ದರು.
ಬಿಜಿಎಸ್ ಪ್ರಾಂಶುಪಾಲ ಶಶಿಧರ್ ಅವರು ಸ್ವಾಗತಿಸಿದರು. ಭಾರ್ಗವಿ ಸಂಗಡಿಗರು ನಾಡಗೀತೆ ಹಾಡಿದರು.