‘ರಾಮ ಏವ ಪರಬ್ರಹ್ಮ ರಾಮ ಏವ ಪರಾಗತಿಃ’

ರಾಮನಾಮದ ಮಹತ್ವ ಕೇಳಿದ ಭಕ್ತಜನಕ್ಕೆ ಶ್ರೀ ಶ್ರೀಧರರು ಅನ್ನುತ್ತಾರೆ …….
‘ರಾಮನಾಮದ ಮಹತ್ವ ಸಂಪೂರ್ಣ ಗೊತ್ತಿರುವವರೆಂದರೆ ಆ ಶಿವಶಂಕರ ಒಬ್ಬರೇ! …..
ರಾಮ ಈ ಶಬ್ದ ಉಚ್ಛಾರ ಮಾಡಿದಾಗ …. ಮೊದಲನೆಯ ‘ರಾ’ ಎಂದು ಬಾಯಿ ತೆರೆದೊಡನೆ ….. ದೇಹಗತ ಪಾಪವೆಲ್ಲಾ …… ವಾಯುರೂಪದಿಂದ ಹೊರಗೆ ಬೀಳುತ್ತದೆ! ….. ಹೊರಗಿರುವ ಪಾಪ ಒಳಗೆ ಬರಬಾರದೆಂದು ‘ಮ’ಕಾರದೊಂದಿಗೆ ಬಾಯಿ ಮುಚ್ಚುತ್ತದೆ!
ಬ್ರಹ್ಮಹತ್ಯಾ ಸಹಸ್ರಾಣಿ ಜ್ಞಾನಾಜ್ಞಾನಕೃತಾನಿಚ|
ಸ್ವರ್ಣಸ್ತೇಯಸುರಾಪಾನ ಗುರುತಲ್ಯಾ ದ್ಯುತಾನಿಚ||
ಕೋಟಿಕೋಟಿ ಸಹಸ್ರಾಣಿ ಉಪಪಾತಕ ಜಾನ್ಯಪಿ|
ಸರ್ವಾಣ್ಯಪಿ ಪ್ರಣಶ್ಯಂತಿ ರಾಮಮಂತ್ರಾನುಕೀರ್ತನಾತ್||
ಈ ಶ್ಲೋಕದಲ್ಲಿ, ಎಷ್ಟೇ ದೊಡ್ಡ ಪಾಪ ಆಗಿದ್ದರೂ ಅದು ರಾಮಮಂತ್ರದಿಂದ ಪರಿಹಾರವಾಗುತ್ತದೆ ಎಂದೇ ಹೇಳಿದೆ!
ಪಾತಾಲಭೂತಲವ್ಯೋಮಾ ಚಾರಿಣಚ್ಛದ್ಮ ಚಾರಿಣಾಃ|
ನ ದೃಷ್ಟುಮಪಿ ಶಕ್ತಾಸ್ತೇ ರಕ್ಷಿತಂ ರಾಮನಾಮಭಿಃ||
ಆಕಾಶ-ಪಾತಾಳ-ಭೂಮಿ ….. ಈ ಮೂರರಲ್ಲೂ ಸಂಚಾರ ಮಾಡುವ …… ಎಷ್ಟೇ ಮಾಯಾವಿಗಳಿದ್ದರೂ ರಾಮನಾಮದಿಂದ ರಕ್ಷಿತನಾದ ಮನುಷ್ಯನನ್ನು ….. ನೋಡಲೂ ಕೂಡ ಅವುಗಳಿಗೆ ಶಕ್ತಿಯಿರುವದಿಲ್ಲ!
ಈ ರಾಮಮಂತ್ರದಿಂದ ಇಹ-ಪರ ಎರಡರಲ್ಲಿಯೂ …… ಸಂಪೂರ್ಣ ಸೌಖ್ಯ ಸಿಗುವದಲ್ಲದೇ ……
ಮೋಕ್ಷ ಸಿಗುತ್ತದೆ …… ಈ ಕಾಯ ಪರಮಾತ್ಮಸ್ವರೂಪವೇ ಆಗುತ್ತದೆ!
ನಾರಾಯಣಾಷ್ಟಾಕ್ಷರೇ ಚ ಶಿವಪಂಚಾಕ್ಷರೇ ತಥಾ|
ಸಾರ್ಥವರ್ಣದ್ವಯೋ ರಾಮೋ ರಮನ್ತೇ ಯತ್ರ ಯೋಗಿನಃ||
‘ನಮಃ ಶಿವಾಯ’ ಮತ್ತು ‘ನಮೋ ನಾರಾಯಣಾಯ’ ಈ ಎರಡು ಶಿವ-ನಾರಾಯಣ ಮಂತ್ರಗಳಿಂದ ಅವುಗಳ ಸಾರಭೂತ ಎರಡು ಅಕ್ಷರ ತೆಗೆದು ಮಾಡಿದ ಶಬ್ದ ‘ರಾಮ’!
ಈ ರಾಮ ಶಬ್ದ ‘ಶಿವತತ್ವ’ ಮತ್ತು ‘ವಿಷ್ಣುತತ್ವ’ಗಳ ಮುಖ್ಯರೂಪ!
‘ನಮಃ ಶಿವಾಯ’ ಈ ಮಂತ್ರದಿಂದ ‘ಮ’ ಈ ಅಕ್ಷರ ತೆಗೆದರೆ ‘ನ ಶಿವಾಯ’ ಎಂದೇ ಉಳಿಯುತ್ತದೆ!
‘ಮ’ಕಾರ ಹೋಗಿದ್ದರಿಂದ ಈ ಶಬ್ದದ ಅರ್ಥವೇನಾಗುತ್ತದೆ?
‘ಸುಖಕ್ಕೆ ಕಾರಣೀಭೂತನಲ್ಲದ’ ಎಂದೇ ಆಗುತ್ತದೆ!
ಈಗ ‘ನಮೋ ನಾರಾಯಣಾಯ’ ದಿಂದ ‘ರಾ’ ಅಕ್ಷರ ತೆಗೆದರೆ ‘ನಮೋ ನಾಯಣಾಯ’ ಎಂಬ ಶಬ್ದ ಉಳಿಯುತ್ತದೆ! ಅದರಅರ್ಥವೇನಾಗುತ್ತದೆ?
‘ತಾರಕನಲ್ಲದವನಿಗೆ ನಮಸ್ಕಾರ’ ಎಂದೇ ಆಗುತ್ತದೆ! ….
‘ರಾಮ’ ನ ಅವತಾರ ಶಿವ ಮತ್ತು ವಿಷ್ಣುವಿನ ಏಕಾತ್ಮಿಕತೆಯನ್ನು ತೋರಿಸಲಿಕ್ಕಾಗಿಯೇ!
ರಾಮಮಂತ್ರ ….. ಇದು ಜಗದ್ಬೀಜ …… ಓಂಕಾರ ಸ್ವರೂಪವಾಗಿದೆ!
ಮುಮುಕ್ಷುಣಾಂ ವಿರಕ್ತಾನಾಂ ತಥಾಚ ಶ್ರಮವಾಸಿನಾಂ|
ಪ್ರಣವತ್ವಾತ್ಸದಾ ಧ್ಯೇಯೋ ಯತೀನಾಂಚ ವಿಶೇಷತಃ||
‘ಯಾರಿಗೆ ಪ್ರಣವ ಮಂತ್ರದ ಅಧಿಕಾರ ಇದೆಯೋ ಅಂಥವರೂ ಸಹ ಈ ರಾಮಮಂತ್ರ ಜಪಿಸಬೇಕು’ ಎಂದೇ ಈ ಶ್ಲೋಕದ ಪ್ರಕಾರ ಉಪನಿಷದ್ದಿನ ಆಜ್ಞೆ!
‘ರಾಮಮಂತ್ರ ಯತಿಗಳ ಧ್ಯೇಯ’ ಎಂದೇ ಈ ಶ್ಲೋಕ ಹೇಳುತ್ತಿರುವಾಗ …. ಸನ್ಯಾಸಿ ರಾಮಮಂತ್ರದ ಜಪ ಮಾಡಬೇಕೋ ಇಲ್ಲವೋ ಎಂಬ ಶಂಕೆ ಬೇಡ!
ರಾಮಮಂತ್ರದ ಅಧಿಕಾರ ಎಲ್ಲರಿಗೂ ಇದೆ!
‘ರಾಮಮಂತ್ರ ಬರೇ ಮುಮುಕ್ಷುಗಳಿಗೆ …… ಸನ್ಯಾಸಿಗಳಿಗೆ – ಗ್ರಹಸ್ಥರಿಗೆ ಅದರ ಉಪಯೋಗವಿಲ್ಲ!’ ಎಂದು ಹೇಳುವದು ಸರಿ ಅಲ್ಲ!
ಭುಕ್ತಿ-ಮುಕ್ತಿ ಎರಡನ್ನೂ ಪಡೆಯಲು ಇಚ್ಛಿಸುವವರಿಗೆ ಆ ಎರಡರ ಲಾಭವೂ ಈ ಮಂತ್ರದಿಂದ ಆಗುತ್ತದೆ!
‘ರಾಮ’ ಶಬ್ದದ ‘ರ’ ಅಕ್ಷರ ಅಗ್ನಿಬೀಜ ಆಗಿದ್ದರಿಂದ ‘ರಾ’ ಈ ಅಕ್ಷರ ಸ್ವಯಂಜ್ಯೋತಿರೂಪ ಬ್ರಹ್ಮನೇ ಆಗಿದೆ!
‘ಮ’ ಅಕ್ಷರ ಮಾಯಾಬೀಜ ……
‘ರಾಮ’ ಉಚ್ಛಾರದಿಂದ ‘ರಾ’ ಈ ಸ್ವಯಂಪ್ರಕಾಶ ಪರಬ್ರಹ್ಮನಲ್ಲಿ ನಂತರ ಉಚ್ಛರಿಸುವ ‘ಮ’ ರೂಪದ ಮಾಯೆಯ ಐಕ್ಯವಾಗಿ ಉಚ್ಛಾರದ ನಂತರವೂ ನಿಗೂಢ ಅವಸ್ಥೆ ಅಂದರೆ ನಿರ್ವಿಕಲ್ಪ ಬ್ರಾಹ್ಮೀ ಸ್ಥಿತಿಯೇ ಇರುತ್ತದೆ!
‘ರಾಮ’ ಈ ಶಬ್ದದ ಈ ನಿರ್ಗುಣ ಬ್ರಹ್ಮರೂಪವೇ ನಿವೃತ್ತಿಮಾರ್ಗಿಗಳ ಧ್ಯೇಯ!
‘ರಾ’ ಅಕ್ಷರ ಪುರುಷರೂಪ ಮತ್ತು ‘ಮ’ ಅಕ್ಷರ ಮಾಯಾಬೀಜ ಅಂದರೆ ಪ್ರಕೃತಿರೂಪ ಎಂಬ ದೃಷ್ಟಿಯಿಂದ ‘ರಾಮ’ ನ ಸ್ವರೂಪ ‘ಸಶಕ್ತಿಕ ಪರಮಾತ್ಮ’ ಎಂದಾಗುತ್ತದೆ! …. ಇದು ಮಾಯೆಯನ್ನೊಳಗೊಂಡ ಪರಮಾತ್ಮನ ಸಗುಣರೂಪ!
ನಿರ್ಗುಣದ ಧ್ಯೇಯವಿಟ್ಟುಕೊಂಡು ಅದರ ಸಗುಣರೂಪದ ಉಪಾಸನೆ ಪ್ರವೃತ್ತಿಮಾರ್ಗಿಗಳಿಗೆ ಹೇಳಿದ್ದಾರೆ!
‘ರಾಮಮಂತ್ರಾರ್ಥ ವಿಜ್ಞಾನೀ …. ‘ ರಾಮಮಂತ್ರದ ಅರ್ಥ ಆದವನು ಜೀವನ್ಮುಕ್ತನಾಗುತ್ತಾನೆ ಎಂಬುದರಲ್ಲಿ ಸಂಶಯವಿಲ್ಲ!
ರಾಮ ಏವ ಪರಬ್ರಹ್ಮ ರಾಮಏವ ಪರಾಗತಿಃ| ರಮನ್ತೇ ಯೋಗಿನೋನನ್ತೇ ನಿತ್ಯಾನಂದೇ ಚಿದಾತ್ಮನಿ|
ಇತಿ ರಾಮಪದೇನಾಸೌ ಪರಬ್ರಹ್ಮಾಭಿಶ್ಚೀಂಯತೇ||
ಶ್ರೀರಾಮ ಪರಬ್ರಹ್ಮರೂಪಿ ….. ಅವನ ಪ್ರಾಪ್ತಿಯೇ ಮೋಕ್ಷ!
ನಾಮರೂಪರಹಿತ ಸಚ್ಚಿದಾನಂದ ನಿರ್ಗುಣ ಪರಮಾತ್ಮನ ಜಾಗದಲ್ಲಿ ಉಪಾಸಕರ ಬಗ್ಗಾಗಿ ನಾಮರೂಪದ ಕಲ್ಪನೆ ಮಾಡಲ್ಪಟ್ಟಿದೆ ….. ಅಂದರೆ ಭಕ್ತನ ಉದ್ಧಾರಕ್ಕಾಗಿ ನಿರ್ಗುಣ ಪರಮಾತ್ಮ ಸಗುಣರೂಪನಾಗುತ್ತಾನೆ!
ಯಾವ ವ್ಯಕ್ತಿಗೆ ಯಾವ ಹೆಸರಿರುತ್ತದೆಯೋ ಆ ಹೆಸರಿನಲ್ಲೇ ಅವನ ಸಂಪೂರ್ಣ ವಿಶೇಷಗಳಿಂದ ಕೂಡಿದ ಆ ವ್ಯಕ್ತಿಯೇ ಇರುತ್ತಾನೆ! ….. ಅಂದರೆ ‘ನಾಮ’ ಮತ್ತು ‘ನಾಮಿ’ ಯಲ್ಲಿ ಭೇದವಿಲ್ಲ!
ಆತ್ಮರೂಪ ಅಂದರೆ ಶ್ರೀರಾಮ!
‘ಸ ಆತ್ಮಾ ಸ ವಿಜ್ಞೇಯಃ’
ರಾಮ ಆತ್ಮರೂಪ ಆಗಿರುವದರಿಂದಲೇ ಅವನನ್ನು ಅರಿಯಬೇಕು! ….. ಹೀಗೆಂದು ಈ ಶ್ರುತಿ ವಚನ!
ರಾಮಮಂತ್ರದ ಜಪದಿಂದ ನಮ್ಮ ಶುದ್ಧ ಆತ್ಮರೂಪವೇ ನಮ್ಮಲ್ಲಿ ತಿರು-ತಿರುಗಿ ಮರುಕಳಿಸುತ್ತಿರುವದು!
ಈ ತಾತ್ವಿಕರೂಪ ನಿಮ್ಮ ಮನಸ್ಸಿನಲ್ಲಿ ಪೂರ್ಣರೀತಿಯಲ್ಲಿ ಪ್ರತಿಫಲಿಸಲಿ ಮತ್ತು ನಿಮ್ಮ ಮೇಲೆ ಶ್ರೀರಾಮನ ಕೃಪೆಯಾಗಲಿ! ನೀವೆಲ್ಲರೂ ಶ್ರೀರಾಮಜಪದಿಂದ ಕೃತಾರ್ಥರಾಗಿರಿ!’ ಎಂದು ಶ್ರೀ ಶ್ರೀಧರ ಸ್ವಾಮಿಗಳು ರಾಮಮಂತ್ರದ ಮೇಲಿನ ತಮ್ಮ ಮಾತು ಮುಗಿಸಿದರು!
‘ಶ್ರೀರಾಮ ಜಯ ರಾಮ ಜಯ ಜಯ ರಾಮ’ ಎನ್ನುತ್ತ ಜನರೆಲ್ಲರೂ ಶ್ರೀರಾಮನ ಜಯಕಾರ ಮಾಡಿದರು!

RELATED ARTICLES  ಇಂದಿನ ‌ದಿನ‌ ಕೆಲವು ರಾಶಿಯವರಿಗೆ ಶುಭ, ಕೆಲವರಿಗೆ ಕೆಲ‌ಸಮಸ್ಯೆಗಳಿವೆ. ಅವುಗಳ ಬಗ್ಗೆ ನೀವು ತಿಳಿಯಬೇಕೆ? ಇಲ್ಲಿದೆ‌ ನೋಡಿ 06/10/2018 ರ ರಾಶಿ ಭವಿಷ್ಯ