ವೃತ್ತಿ ಜೀವನದಲ್ಲಿ ನಿವೃತ್ತರಾದಾಗ ಕೆಲ ಜನರು ಎಲ್ಲವೂ ಮುಗಿಯಿತು, ಜೀವನದಲ್ಲಿ ಇನ್ನು ಏನೂ ಇಲ್ಲ ,ನಾವು ಏತಕ್ಕೂ ಪ್ರಯೋಜನವಿಲ್ಲ ಎಂಬ ನಿರುತ್ಸಾಹ ಭಾವದಿಂದ ಉಳಿದ ಜೀವನವನ್ನು ನೂಕುತ್ತಾರೆ.
ಕೆಲವೊಬ್ಬರು ವೃತ್ತಿ ಜೀವನದ ನಿವೃತ್ತಿಯು ನಮ್ಮ ಪ್ರವೃತ್ತಿಯ ಉತ್ಕರ್ಷ ಕ್ಕೆ ಭಗವಂತ ನೀಡಿದ ಸದವಕಾಶ ಎಂಬ ಭಾವನೆಯಿಂದ ಉತ್ಸಾಹ ಭರಿತರಾಗಿ ತಮ್ಮ ಜೀವನದ ಎರಡನೇ ಇನ್ನಿಂಗ್ಸ್ ಆರಂಭಿಸುತ್ತಾರೆ.
ಮೂರು ದಶಕಕ್ಕೂ ಹೆಚ್ಚಿನ ಕಾಲ ಕರ್ಣಾಟಕ ಬ್ಯಾಂಕಿನಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯ ನಂತರ ಸಾಹಿತ್ಯದಲ್ಲಿ ತೊಡಗಿಸಿಕೊಂಡ ಶ್ರೀ ಚಂದ್ರಶೇಖರ ಉಪಾಧ್ಯಾಯ ಧಾರೇಶ್ವರ ಇವರು ಕಾಲಕಾಲಕ್ಕೆ ಪತ್ರಿಕೆ, ಜಾಲತಾಣ ಮುಂತಾದವುಗಳಲ್ಲಿ ಪ್ರಕಟಿಸಿದ ತಮ್ಮ ಕವನಗಳನ್ನೆಲ್ಲ ಒಂದುಗೂಡಿಸಿ ಕವನ ಸಂಕಲನ ಪ್ರಕಟಿಸುವ ಹುಮ್ಮಸ್ಸಿನಲ್ಲಿದ್ದಾರೆ. ಈ ಸಂಕಲನ ಕ್ಕೆ ಸಂರ್ಧೋಚಿತ ಹೆಸರನ್ನೂ ಇಟ್ಟಿದ್ದಾರೆ, “ಅರವತ್ತರ ಅರಳು”.
ಇಲ್ಲಿ-ಪರಿಸರದ ಬಗೆಗೆ-ಪ್ರೀತಿ,ಕಾಳಜಿಯಿದೆ.
ಕಲುಷಿತ ವಾತಾವರಣದ ಬಗೆಗೆ ಖೇದವಿದೆ.
ಲಂಚ,ರುಷುವತ್ತುಗಳ ಬಗ್ಗೆ,ಸ್ವಜನಪಕ್ಷಪಾತ,
ಭ್ರಷ್ಟಾಚಾರಗಳ ಕುರಿತು ಆಕ್ರೋಶವಿದೆ.ನಮ್ಮ
ಶಿಕ್ಷಣ ಪದ್ಧತಿಯ ಬಗ್ಗೆ ಅಸಮಾಧಾನವಿದೆ.
ಲಜ್ಜಾರಹಿತ ರಾಜಕಾರಣದ ಬಗ್ಗೆ ಕ್ರೋಧವಿದೆ.
ಜ್ವಲಂತ ಸಮಸ್ಯೆಗಳು ದಿನೇದಿನೇ ಉಲ್ಬಣ
ಗೊಳ್ಳುತ್ತಿರುವ ಬಗ್ಗೆ ಅತೃಪ್ತಿಯಿದೆ.ಸರಕಾರದ
ಮಲತಾಯಿ ಧೋರಣೆಗಳ ಬಗ್ಗೆ ಸಿಟ್ಟೇ ಇದೆ.
ಬಡವರ ಪರಿಸ್ಥಿತಿಯ ಬಗ್ಗೆ ಮರುಕವಿದೆ.
ಬಾಲಕಾರ್ಮಿಕರ ಬಗ್ಗೆ,ಕೊಳಚೆನಿವಾಸಿಗಳ
ಬಗೆಗೆ ಸಹಾನುಭೂತಿಯಿದೆ.ಅಂಗವಿಕಲರ
ಕುರಿತು ಪ್ರೀತಿ ಮಿಶ್ರಿತ ಅನುಕಂಪವಿದೆ.ಇಳೀ
ವಯಸ್ಸಿನವರ ಕಡೆಗೆ ಗೌರವದೃಷ್ಟಿಯಿದೆ.
ನಶಿಸುತ್ತಿರುವ ಮಾನವೀಯತೆ,ಬಾಂಧವ್ಯ,
ಕರ್ತವ್ಯಪ್ರಜ್ಞೆ,ಪರೋಪಕಾರ,ಸಹಕಾರದ
ಸ್ವಭಾವ,ಸನಾತನ ಮೌಲ್ಯಗಳು-ಇತ್ಯಾದಿಗಳ
ವಿಚಾರದಲ್ಲಿ ಕಳವಳವಿದೆ.ಸ್ತ್ರೀಶೋಷಣೆ-
ಮಹಿಳಾಸ್ವಾತಂತ್ರ್ಯಹರಣದಂಥಾ ವಿಷಯ
ಗಳಲ್ಲಿ ಕ್ರಾಂತಿಕಾರೀ ಮನೋಭಾವಕ್ಕೆ ಒತ್ತು
ಕೊಡಬೇಕೆನ್ನುವುದಕ್ಕೆ ಸಹಮತವಿದೆ.ವಿಧವೆ
ಯರ ಅಳಲಿಗೆ ಸ್ಪಂದನವಿದೆ.
ಹಾಗೆಯೇ,ಪ್ರೀತಿ-ಪ್ರಣಯಗಳಲ್ಲೂ ಹಿಂದೆ
ಬಿದ್ದಿಲ್ಲ.ನವಿರಾದ ಭಾವಗಳ ಮೆರವಣಿಗೆಯಿದೆ
ಅಲ್ಲಲ್ಲಿ.ತುಡಿತ,ಮಿಡಿತಗಳೂ ಸಾಕಷ್ಟಿವೆ.
ವಿರಹದಲ್ಲಿನ ನೋವೂ ಇದೆ.ಜೊತೆಯಾದ
ಖುಷಿಯಿದೆ.ಕನಸಿನ ಮಹಡಿಮನೆಯಿದೆ.
ಈ ಕೃತಿಯ ಲೋಕಾರ್ಪಣೆಯು ಜನವರಿ ೨೦ ,೨೦೧೯ ಭಾನುವಾರ ಮುಂಜಾನೆ ೯.೩೦ ಕ್ಕೆ ಕುಮಟಾದ ಹವ್ಯಕ ಸಭಾಮಂಟಪದಲ್ಲಿ ನೆರವೇರಲಿದೆ.
ಕಾರ್ಯಕ್ರಮ ದ ಅಧ್ಯಕ್ಷರಾದ ಡಾ. ಟಿ ಟಿ ಹೆಗಡೆ, ಕುಮಟಾ ಇವರು ಪುಸ್ತಕ ಬಿಡುಗಡೆ ಮಾಡಲಿದ್ದು ನಿವೃತ್ತ ಪ್ರಾಚಾರ್ಯ ರಾದ ಶ್ರೀ ನಿತ್ಯಾನಂದ ಹೆಗಡೆ,ಮೂರೂರು ಅವಲೋಕಿಸಲಿದ್ದಾರೆ. ಶ್ರೀ ಜನಾರ್ಧನ ಹಂದೆ ಮಂಗಳೂರು, ಶ್ರೀ ಕೃಷ್ಣಮೂರ್ತಿ ಹೆಬ್ಬಾರ ಹೊನ್ನಾವರ ಇವರುಗಳು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಶ್ರೀಮತಿ ಲತಾ ಹೆಗಡೆ ಹಾಗೂ ಕುಮಾರಿ ಅನೂಷಾ ಸಂಕಲನದ ಕೆಲವು ಗೀತೆಗಳಿಗೆ ಭಾವ ತುಂಬಿ ಹಾಡಲಿದ್ದಾರೆ. ಶ್ರೀಮತಿ ಮಾಧುರಿ ಶ್ರೀ ರಾಮ ಮಂಗಳೂರು ಇವರು ಸಭಾ ಸಮನ್ವಯ ಮಾಡಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಸಾಹಿತ್ಯಾಭಿಮಾನಿಗಳು ಆಗಮಿಸಿ ಕಾವ್ಯ ಕಲಾ ಕುಸುಮದ ವಿಕಸನಕ್ಕೆ ಪ್ರೋತ್ಸಾಹಿಸ ಬೇಕೆಂದು ಶ್ರೀ ಚಂದ್ರಶೇಖರ ಉಪಾಧ್ಯಾಯ ಧಾರೇಶ್ವರ ಅವರು ವಿನಂತಿಸಿದ್ದಾರೆ.