ಕುಮಟಾ: ಇತ್ತೀಚಿನ ದಿನಗಳಲ್ಲಿ ವಿವೇಕ ನಗರದ ಮೂಲಭೂತ ವ್ಯವಸ್ಥೆ ಹದಗೆಟ್ಟಿದ್ದು, ಒಳ ಚರಂಡಿ ಯೋಜನೆಯ ಅಸಮರ್ಪಕ ಕಾಮಗಾರಿಯಿಂದ ಅನೇಕ ರಸ್ತೆಗಳು ಹದಗೆಟ್ಟಿ, ಅನೇಕ ಅಪಘಾತಗಳು ಸಂಭವಿಸುತ್ತಿವೆ. ರಾತ್ರಿಯ ಸಮಯದಲ್ಲಿ ಅನೇಕ ಬೀದಿ ದೀಪಗಳು ಉರಿಯುವುದಿಲ್ಲ, ಇದರಿಂದಾಗಿ ಮಹಿಳೆಯರು, ಮಕ್ಕಳು ರಾತ್ರಿಯ ಸಮಯದಲ್ಲಿ ಹೊರಬರದಂತಾಗಿದೆ. ಇನ್ನು ಸಾರಾಯಿಯಂತಹ ಮಾದಕ ವಸ್ತುಗಳು ಯತೇಚ್ಛವಾಗಿ ಮಾರಾಟವಾಗುತ್ತಿದೆ. ಎಲ್ಲೆಂದರಲ್ಲಿ ಕುಡಿದು ಎಸೆದ ಸಾರಾಯಿ ಬಾಟಾಲಿಗಳು ಬಿದ್ದಿರುತ್ತವೆ. ನಮ್ಮ ಸಂಘಟನೆಯಿಂದ ಆಗುತ್ತಿರುವಂತಹ ಕೆಲಸಗಳು ಅಧಿಕಾರವಿರುವ ಪುರಸಭೆ ಮಾಡುತ್ತಿಲ್ಲ. ಸಂಬಂಧಪಟ್ಟ ಪುರಸಭೆಯ ಸದಸ್ಯರು ಈ ಸಮಸ್ಯೆಗಳ ಬಗೆಗೆ ಯೋಚಿಸುತ್ತಿಲ್ಲ ಎಂಬುದು ಬೇಸರದ ಸಂಗತಿ ಎಂದು ವಿವೇಕ ನಗರ ವಿಕಾಸ ಸಂಘದ ಸದಸ್ಯರು ಹಾಗೂ ಪದಾಧಿಕಾರಿಗಳು ಸ್ಥಳೀಯ ಸಮಸ್ಯೆಯ ಬಗೆಗೆ ಪತ್ರಕರ್ತರಿಗೆ ಮಾಹಿತಿ ನೀಡಿದರು.



    ಒಳ ಚರಂಡಿ ಯೋಜನೆಯಿಂದ ಸಂಪೂರ್ಣ ಹಾಳು ಬಿದ್ದ ರಸ್ತೆಗಳನ್ನು ಸರಿಪಡಿಸುವುದು, ಕುಡಿಯುವ ನೀರಿನ ಸಮಸ್ಯೆ, ಅಗತ್ಯವಿರುವಲ್ಲಿ ವಿದ್ಯುತ್ ಕಂಬಗಳು ಹಾಗೂ ಬೀದಿ ದೀಪಗಳು ಹಾಗೂ ವಿವೇಕ ನಗರದ ಗಾರ್ಡನ್ನಿಗೆ ಮೂಲಭೂತ ಸೌಕರ್ಯವನ್ನು ಒದಗಿಸುವುದು ಸೇರಿದಂತೆ ಅನೇಕ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ವಿವೇಕ ನಗರ ವಿಕಾಸ ಸಂಘ ಸಂಬಂಧಪಟ್ಟ ಇಲಾಖೆಗೆ ಹಾಗೂ ಪುರಸಭೆಗೆ ಆಗ್ರಹಿಸಿತು.

RELATED ARTICLES  ಶ್ರೀಗುರುಲಿಂಗೇಶ್ವರ ಸ್ವಾಮೀಜಿ ಯವರಿಗೆ ಗೋಕರ್ಣ ಗೌರವ


ಸಂಘದ ಅಧ್ಯಕ್ಷ ಎಮ್ ಆರ್ ನಾಯಕ ಸಮಸ್ಯೆಗಳನ್ನು ವಿವರಿಸುತ್ತಾ, ಸ್ಥಳೀಯವಾಗಿ ಅತ್ಯಂತ ಸಾಮರಸ್ಯ ಹಾಗೂ ಮೂಲಭೂತ ಸೌಕರ್ಯ ದೊರೆಯಬೇಕೆಂಬ ಉದ್ದೇಶದಿಂದ ವಿವೇಕನಗರ ವಿಕಾಸಸಂಘವನ್ನು ನಿರ್ಮಿಸಿಕೊಂಡಿದ್ದೇವೆ. ಒಂದು ವರ್ಷದಿಂದ ವನಮಹೋತ್ಸವ, ಪ್ಲಾಸ್ಟಿಕ್ ಬಳಕೆ ವಿರುದ್ಧ ಜಾಥಾ, ಪ್ರತೀ ಭಾನುವಾರ ಪ್ಲಾಸ್ಟಿಕ್ ಸಂಗ್ರಹಿಸಿ ಪುರಸಭೆಗೆ ನೀಡುವುದರ ಜೊತೆಗೆ ಹಲವಾರು ಜನಪರ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದೇವೆ. ಪ್ಲಾಸ್ಟಿಕ್ ಬಳಸಬಾರದು ಎನ್ನುವ ನಿಟ್ಟಿನಲ್ಲಿ ಬಟ್ಟೆ ಚೀಲಗಳನ್ನು ತಯಾರಿಸಿ ಸಾರ್ವಜನಿಕರಿಗೆ ವಿತರಿಸಿದ್ದೇವೆ. ಸಾಮಾಜಿಕ ಸಂಘಟನೆಯ ಮಿತಿಯಲ್ಲಿ ನಗರದ ಉನ್ನತಿಗಾಗಿ ಸಾಕಷ್ಟು ಕೆಲಸಗಳನ್ನು ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.

RELATED ARTICLES  ಉತ್ತರಕನ್ನಡದ ಪ್ರಮುಖ ಸುದ್ದಿಗಳು.

ಇನ್ನು ವಿವೇಕ ನಗರದ ಗಾರ್ಡನ್ ಎಂಬ ಸ್ಥಳ ಗುರುತಿಸದಂತಾಗಿದೆ. ನಮ್ಮ ಸಂಘದ ವತಿಯಿಂದ ವನಮಹೋತ್ಸವ ಆಚರಿಸಿ ನೆಟ್ಟಿರುವಂತಹ ಗಿಡಗಳನ್ನು ಹೊರತು ಪಡಿಸಿದರೆ ಬೇರೆ ಯಾವುದೇ ಗಾರ್ಡನ್ನಿನ ಕಲ್ಪನೆಯೂ ಬರದಂತಾಗಿದೆ. ಗಾರ್ಡನ್ನಿನ ತಡೆಗೋಡೆಗೆ ನಿರ್ಮಿಸಿದ ಗೇಟ್ ಮುರಿದು ವರ್ಷಗಳೇ ಕಳೆದಿವೆ. ಪುರಸಭೆಗೆ ಈ ಕುರಿತು ಎಷ್ಟೇ ಮನವಿಯನ್ನು ನೀಡಿದರೂ ಸಹ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಮಯಕ್ಕೆ ಸರಿಯಾಗಿ ಸಮಸ್ಯೆಗಳು ಬಗೆಹರಿಯದಿದ್ದರೆ ಜಾಗೃತಿ ಜಾಥಾ ಹಾಗೂ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎಸ್.ಆಯ್ ನಾಯ್ಕ, ನಿರ್ದೇಶಕರಾದ ಜಯದೇವ ಬಳಗಂಡಿ, ಕಾರ್ಯದರ್ಶಿ ದತ್ತಾತ್ರೇಯ ಭಟ್ಟ, ಸದಸ್ಯರಾದ ಕೃಷ್ಣ ಭಟ್ಟ, ಅರುಣ ಹೆಗಡೆ, ತಿಮ್ಮಪ್ಪಾ ಮುಕ್ರಿ,ಕುಮಾರ್ ಕವರಿ,
ಮಂಜುನಾಥ ಗೌಡ,ವಿ.ವಿ.ಹೊಸಕಟ್ಟಾ,
ಮಹಾಬಲೇಶ್ವರ ಹೆಬ್ಬಾರ ಹಾಗೂ ಇನ್ನಿತರ ಪ್ರಮುಖರು ಹಾಜರಿದ್ದರು.