ಕುಮಟಾ: ವೃತ್ತಿ ರಂಗಭೂಮಿ ಜನ ಸಾಮಾನ್ಯರ ಕನ್ನಡಿಯಂತೆ ದುಡಿಯುತ್ತಿದೆ. ಪ್ರೇಕ್ಷಕ ತನ್ನನ್ನು ರಂಗಭೂಮಿಯ ಪಾತ್ರಗಳಲ್ಲಿ ಕಂಡುಕೊಳ್ಳತ್ತ ತನ್ನ ಬದುಕನ್ನೇ ಪರಾಮರ್ಶಿಸಿಕೊಳ್ಳುತ್ತಾನೆ. ಇದು ರಂಗಭೂಮಿಯ ಶಕ್ತಿ ಎಂದು ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಅಭಿಪ್ರಾಯಪಟ್ಟರು.
ಅವರು ಪಟ್ಟಣದಲ್ಲಿ 52 ದಿನಗಳ ಕಾಲ 6 ನಾಟಕಗಳ ಮೂಲಕ ನೂರಕ್ಕೂ ಹೆಚ್ಚು ಪ್ರದರ್ಶನ ನೀಡಿದ ಜೇವರ್ಗಿಯ ಶ್ರೀ ವಿಶ್ವಜ್ಯೋತಿ ಪಂಚಾಕ್ಷರ ನಾಟ್ಯ ಸಂಘದ ಕಲಾವಿದರನ್ನು ಜಿಲ್ಲಾ ಕ.ಸಾ.ಪ ವತಿಯಿಂದ ಸನ್ಮಾನಿಸಿ ಮಾತನಾಡುತ್ತಿದ್ದರು.
ಕಂಪನಿ ನಾಟಕಗಳ ಭವಿಷ್ಯ ಕ್ಷೀಣ ಸುತ್ತಿದೆ ಎಂಬ ಆತಂಕಗಳ ನಡುವೆಯೇ ರಂಗಭೂಮಿ ಪರಂಪರೆಯ ಮತ್ತೊಂದು ಕೊಂಡಿಯಾಗಿ ಕುಮಟಾದಲ್ಲಿ ಜೇವರ್ಗಿ ಕಂಪನಿ ಸಾಲು ಸಾಲಾಗಿ ಯಶಸ್ವಿ ಪ್ರದರ್ಶನ ನೀಡಿ ಜನರಲ್ಲಿ ವಿಶ್ವಾಸ ಗಿಟ್ಟಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಕ.ಸಾ.ಪ. ನಾಡಿನ ಎಲ್ಲ ಕಲಾವಿದದರ ಪರವಾಗಿ ಜೇವರ್ಗಿ ಕಂಪನಿಯ ಕಲಾವಿದರಿಗೆ ಸನ್ಮಾನಿಸುವುದರ ಮೂಲಕ ರಂಗಭೂಮಿಗೆ ನಮನ ಸಲ್ಲಿಸಿದೆ ಎಂದರು.
ಕುಮಟಾದ ಕಲಾ ಗಂಗೋತ್ರಿ ಸಂಘಟನೆಯವರು ಜೇವರ್ಗಿ ಕಂಪನಿಯ ಕಲಾವಿದರನ್ನು ಇಲ್ಲಿಗೆ ಕರೆಸಿ ಕಲಾಸಕ್ತರಿಗೆ ಮನರಂಜನೆ ನೀಡುವಲ್ಲಿ ಮಾಡಿದ ಪ್ರಯತ್ನ ಪ್ರಶಂಸನೀಯ. ಕಲಾಭಿಮಾನಿಗಳ ಪ್ರೋತ್ಸಾಹ ಇಲ್ಲದಿದ್ದರೆ ಕಲಾವಿದರು ತೆರೆಮರೆಗೆ ಸರಿದು ಬಿಡುತ್ತಾರೆ. ಹೀಗಾವುದಕ್ಕೆ ಜನಸಮುದಾಯ ಅವಕಾಶ ನೀಡಬಾರದು. ಯಾಕೆಂದರೆ ರಂಗಭೂಮಿ ಕೇವಲ ಮನರಂಜನೆಗಾಗಿ ಮಾತ್ರ ಅಲ್ಲ, ಅದು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಬಹು ಮಹತ್ವದ ಕೊಡುಗೆ ನೀಡುತ್ತದೆ ಎಂದು ಅರವಿಂದ ಕರ್ಕಿಕೋಡಿ ಹೇಳಿದರು.
ಜೇವರ್ಗಿ ಕಂಪನಿಯ ಜನಪ್ರಿಯ ನಾಟಕವಾದ ‘ಕುಂಟಕೋಣ ಮೂಕ ಜಾಣ’ ಸಿನಿಮಾ ತಯಾರಾಗುತ್ತಿದ್ದು ಇದೇ ಕಲಾವಿದರನ್ನು ಅಲ್ಲಿಯೂ ಬಳಸಿಕೊಳ್ಳಲಾಗಿದೆ. ಇದರಿಂದಾಗಿ ಜನರಲ್ಲಿ ಸಿನಿಮಾ ಬಗ್ಗೆ ಬಹು ನಿರೀಕ್ಷೆ ಹುಟ್ಟಿಸಿದೆ ಎಂದು ಕರ್ಕಿಕೋಡಿ ನುಡಿದರು.
ಜಿಲ್ಲಾ ಕ.ಸಾ.ಪ ಜೇವರ್ಗಿ ಕಂಪನಿಯ ಕಲಾವಿದರಾದ ದಯಾನಂದ ಬಿಳಗಿ, ಗುಬ್ಬಿ ವೀರಣ್ಣ ಅವರ ಮರಿ ಮರಿ ಮೊಮ್ಮಗಳು ಶ್ವೇತಾ ಬಿಳಗಿ, ಶರತ್ ಕುಂಬ್ಳೆ, ಫಯಾಜ್ ಕರ್ಜಗಿ, ಬಾಬಣ್ಣ ಪಾಟೀಲ ಅವರನ್ನು ಸನ್ಮಾನಿಸಿತು.
ಈ ಸಂದರ್ಭದಲ್ಲಿ ಕಲಾ ಗಂಗೋತ್ರಿ ಸಂಘಟನೆಯ ಅಧ್ಯಕ್ಷ ಶ್ರೀಧರ ನಾಯ್ಕ, ಪದಾಧಿಕಾರಿಗಳಾದ ಗಣೇಶ ಭಟ್ಟ, ಎಂ.ಟಿ.ನಾಯ್ಕ, ಆರ್.ಡಿ.ಪೈ, ಜಿ.ಎಸ್.ಭಟ್ ಮುಂತಾದವರು ಇದ್ದರು.
ತಾಲೂಕು ಕ.ಸಾ.ಪ ಕಾರ್ಯದರ್ಶಿ ಎಂ.ಎಂ.ನಾಯ್ಕ ಕಾರ್ಯಕ್ರಮ ನಿರೂಪಿಸಿದರು.
ಕಲಾ ಗಂಗೋತ್ರಿ ಸನ್ಮಾನ: ಜೇವರ್ಗಿ ಕಂಪನಿಯ ಇನ್ನಿತರ ಕಲಾವಿದರಾದ ಹರೀಶ ಹಿರಿಯೂರು, ಪ್ರಿಯಾ ಹಿರಿಯೂರು, ಮುನ್ನಾ ಕುಕ್ಕನೂರು, ದಾವಲ್ ತಾಳಿಕೋಟೆ, ಮಮತಾ ಗುಡೂರು, ಚಂದ್ರು ಮೈಲಾರ, ಬಸವಲಿಂಗಪ್ಪ ಕೊಡ್ಲಿ, ಮಾದೇವಿ ದಾವಣಗೇರಿ ಮುಂತಾದವರನ್ನು ಕಲಾ ಗಂಗೋತ್ರಿ ಸಂಘಟನೆ ಸನ್ಮಾನಿಸಿ ಕಲೆಗೆ ಗೌರವ ಅರ್ಪಿಸಿತು.
ಜೇವರ್ಗಿ ಕಂಂಪನಿಯ ಕಲಾವಿದರು ಕುಮಟಾದಲ್ಲಿ ಅಮರ ಫಲ, ನಗ್ಸಿ ನಗ್ಸಿ ಅಳಸ್ತಾಳ,ಕುಂಟ ಕೋಣ ಮೂಕ ಜಾಣ, ಅಪ್ಪ ಸಂದ್ಯಾಗ ಮಗಳು ಮಂದ್ಯಾಗ, ಭೂಮಿ ತೂಕದ ಹೆಣ್ಣು, ಮಂಗಳೂರು ಮಾಣಿ ಹುಬ್ಬಳ್ಳಿ ರಾಣಿ ಈ 6 ನಾಟಕಗಳನ್ನು ಪ್ರದರ್ಶಿಸಿ ಜನರಿಂದ ಮೆಚ್ಚುಗೆಗಳಿಸಿದ್ದರು